ರಾಯಬಾಗ : ಅತ್ಯಾಚಾರ ಆರೋಪಿತ ಸ್ವಾಮಿ ಮಠ ನೆಲಸಮ
ಬೆಳಗಾವಿ : ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಜೈಲು ಸೇರಿರುವ ಲೊಕೇಶ್ವರ ಸ್ವಾಮೀಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿರುವ ರಾಮಮಂದಿರ ಮಠವನ್ನು ನೆಲಸಮ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ ಗೈರಾಣ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ ರಾಮಮಂದಿರ ಮಠವನ್ನು ಮೂರು ಜೆಸಿಬಿ ಸಹಾಯದಿಂದ ರಾಯಬಾಗ ತಹಶಿಲ್ದಾರ ನೇತೃತ್ವದಲ್ಲಿ ನೆಲಸಮಗೊಳಿಸಲಾಗಿದೆ.
ಕಳೆದ ಎಂಟು ವರ್ಷಗಳ ಹಿಂದೆ ಮೇಖಳಿ ಗ್ರಾಮದಲ್ಲಿ ಸುಮಾರು 8 ಎಕರೆ ಸರಕಾರಿ ಜಮೀನು ಅತಿಕ್ರಮಣ ಮಾಡಿಕೊಂಡು ಕಾಮುಖ ಲೋಕೇಶ್ವರ ಸ್ವಾಮಿ ರಾಮ ಮಂದಿರ ಹೆಸರಿನಲ್ಲಿ ಮಠ ನಿರ್ಮಿಸಿದ್ದ. ಸಧ್ಯ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿರುವ ಸ್ವಾಮಿಯ ಮಠವನ್ನು ತಾಲೂಕಾಡಳಿತ ನೆಲಸಮಗೊಳಿಸಿದೆ.
ಪ್ರಕರಣದ ಹಿನ್ನಲೆ : ಮೇ. 13 ರಂದು ತಮ್ಮ ಮಠಕ್ಕೆ ಬಂದ ಭಕ್ತೆ ಬಾಲಕಿಯನ್ನು ತನ್ನ ಕಾರಿನಲ್ಲಿ ಸ್ವಾಮೀಜಿ ಕರೆದೊಯ್ದಿದ್ದಾನೆ. ರಾಯಚೂರು, ಬಾಗಲಕೋಟೆ ಸೇರಿದಂತೆ ವಿವಿಧ ಭಾಗದಲ್ಲಿ ಬಾಲಕಿಯನ್ನು ಸುತ್ತಾಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ನಗರ ಬಸ್ ನಿಲ್ದಾಣದಲ್ಲಿ ಬಿಟ್ಟು ಸ್ವಾಮಿ ಪರಾರಿಯಾಗಿದ್ದ.
ಈ ಕುರಿತು ಮೇ. 21 ರಂದು ಬಾಲಕಿ ಕುಟುಂಬದವರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿತ್ತು. ಮೇ. 24 ರ ಶುಕ್ರವಾರ ಅತ್ಯಾಚಾರ ಆರೋಪಿ ಲೋಕೇಶ್ವರ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮೂಲತಃ ಕಲಬುರಗಿ ಜಿಲ್ಲೆ ಚಿತ್ತಾಪುರದ ಲೋಕೇಶ್ವರ ಶಾಬಣ್ಣ ಭಂಗಿ ( 30 ) ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ಸರಕಾರಿ ಜಮೀನಿನಲ್ಲಿ ರಾಮಮಂದಿರ ಮಠ ನಿರ್ಮಿಸಿದ್ದ. ಈ ಕುರಿತು 2021 ಎಲ್ಲಿ ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಅಕ್ರಮ ಕೆಲಸ ಮಾಡುತ್ತಾನೆ ಎಂದು ದೂರು ನೀಡಿದ್ದರು. ಅಷ್ಟೇ ಅಲ್ಲದೆ ಈ ಸ್ವಾಮೀಜಿ ಚಿಕ್ಕೋಡಿಯಲ್ಲಿ ಕೃಷ್ಣ ಮಠವನ್ನು ಕಟ್ಟುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಎಂಬ ಆರೋಪವರು ಕೇಳಿಬಂದಿತ್ತು.


