
Video – ಆ ನೋವಿನಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು ; ಸತ್ಯ ಬಿಚ್ಚಿಟ್ಟ ರಮೇಶ್ ಕತ್ತಿ

ಬೆಳಗಾವಿ : ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ರಮೇಶ್ ಕತ್ತಿ ಕೊನೆಗೂ ತಮ್ಮ ರಾಜೀನಾಮೆಯ ನಿರ್ಧಾರ ತಿಳಿಸಿದ್ದಾರೆ.
ಸದಸ್ಯತ್ವ ವಿಚಾರದಲ್ಲಿ ಗೊಂದಲ ಉಂಟಾಗಿದೆ ಎಂಬ ಮಾತು ಕೇಳಿಬಂದಿತ್ತು. ನಂತರ ಅಧ್ಯಕ್ಷರ ವಿರುದ್ಧ ನಿರ್ದೇಶಕರು ಅವಿಶ್ವಾಸ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಕುರಿತು ರಮೇಶ್ ಕತ್ತಿ ಸ್ಪಷ್ಟತೆ ನೀಡಿದ್ದು ಕೆಲವು ವಿಚಾರದಲ್ಲಿ ನೋವು ಉಂಟಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಡಿಸಿಸಿ ಬ್ಯಾಂಕಿನ ಸದಸ್ಯತ್ವ ವಿಚಾರವಾಗಿ ಕೆಲವರು ಬೇಕು ಎಂದರೆ ಇನ್ನೂ ಕೆಲವರು ಬೇಡ ಎಂಬ ನಿರ್ಧಾರಕ್ಕೆ ಬಂದರು. ಇದು ನನಗೆ ನೋವು ಉಂಟುಮಾಡಿದ್ದು, ಇದೇ ಕಾರಣ ರಾಜೀನಾಮೆ ನಿರ್ಧಾರಕ್ಕೆ ಬರುವಂತಾಗಿದೆ ಎಂದರು.
ಸದಸ್ಯತ್ವ ವಿಚಾರವಾಗಿ ನನಗೆ ಯಾರೂ ರಾಜೀನಾಮೆ ನೀಡುವಂತೆ ಕೇಳಲಿಲ್ಲ. ಆದರೆ ನಾನು ಹಿರಿಯರ ಜೊತೆ ವಿಷಯ ಪ್ರಸ್ತಾಪಿಸಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ. ಸಿಂಹ ನಾಲ್ಕು ಹೆಜ್ಜೆ ಮುಂದೆ ಇಟ್ಟಿದೆ ಎಂದರೆ ಹಿಂದೆ ತಿರುಗಿ ತನ್ನ ನಡೆದುಬಂದ ದಾರಿ ಅವಲೋಕನ ಮಾಡುತ್ತದೆ.
ನಾನು ನನ್ನ ಸುಧೀರ್ಘ 41 ವರ್ಷ ಅವಧಿಯಲ್ಲಿ ಈ ರೀತಿಯ ಪರಿಸ್ಥಿತಿ ನೋಡಿರಲಿಲ್ಲ. ಒಮ್ಮತದ ನಿರ್ಧಾರಕ್ಕೆ ಬರದ ಕಾರಣ ನಾನೇ ಮುಂದೆ ಹೋಗಿ ರಾಜೀನಾಮೆ ನಿರ್ಧಾರಕ್ಕೆ ಬಂದಿರುವೆ ಎಂದು ರಮೇಶ್ ಕತ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ.