
ಭಾಷಣ ಮಾಡಿ ಸೊಸೈಟಿ ಗೆದ್ದರೆ ಲೀಡರ್ ಆಗಲ್ಲ ; ಕತ್ತಿಗೆ ಜಾರಕಿಹೊಳಿ ಟಾಂಗ್…!

ಬೆಳಗಾವಿ : ಕೇವಲ ಭಾಷಣ ಮಾಡಿ ಒಂದು ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದರೆ ಲೀಡರ್ ಆಗಲು ಸಾಧ್ಯವಿಲ್ಲ. ಜನರ ಬಳಿ ಹೋಗಿ ಕಷ್ಟ ಕೇಳಿ ಬಿಸಿಲು ನೋಡಿದವನೇ ನಿಜವಾದ ಲೀಡರ್ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಟಾಂಗ್ ಕೊಟ್ಟರು.
ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು, ನಮ್ಮನ್ನು ನಂಬಿರುವ ಕಾರ್ಯಕರ್ತರಿಗಾಗಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಮಾಡಿದ್ದೇವೆ. ಕೇವಲ ಮೂರು ತಿಂಗಳ ಅಧಿಕಾರಾವಧಿಯಲ್ಲಿ 10 ಸಾವಿರಕ್ಕೂ ಅಧಿಕ ಮತದಾರರ ಬೆಂಬಲ ಸಿಕ್ಕಿದ್ದರೂ ನಾವು ಜನರನ್ನು ಇನ್ನಷ್ಟು ತಲುಪುವಲ್ಲಿ ವಿಫಲರಾಗಿದ್ದೇ ಸೋಲಿಗೆ ಕಾರಣ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಸ್ಥಳೀಯ ಸಂಸ್ಥೆ ಚುನಾವಣೆಯಾಗಿದ್ದ ಹಿನ್ನಲೆಯಲ್ಲಿ ಜನರಿಗೆ ಸರಿಯಾಗಿ ಮತದಾನದ ಕುರಿತು ಮಾಹಿತಿ ನೀಡುವಲ್ಲಿ ವಿಫಲರಾಗಿದ್ದೇವೆ. 5 ಸಾವಿರ ಮತಗಳು ತಿರಸ್ಕೃತಗೊಂಡಿವೆ. ಸುಮಾರು 12 ಸಾವಿರ ಮತ ನಮಗೆ ಬಂದಿದ್ದು ಮುಂಬರುವ ದಿನಗಳಲ್ಲಿ ಇದೇ ಪಾಠ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.
ನಮ್ಮ ವಿರೋಧಿಗಳ ಬಣ 30 ವರ್ಷಗಳಿಂದ ರಾಜಕಾರಣ ಮಾಡಿ 20 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ನಾವು 3 ತಿಂಗಳಲ್ಲಿ ಪ್ರಚಾರ ಮಾಡಿ 12 ಸಾವಿರ ಮತಗಳನ್ನು ಪಡೆದಿದೇವೆ. ನಾವು ಎಷ್ಟು ಗುರಿ ಮುಟ್ಟಬೇಕು ಅಷ್ಟು ಹಂತದ ಗುರಿ ತಲುಪಿದ್ದೇವೆ. ಸೋಲು-ಗೆಲುವು ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸೋಲು ಅನುಭಿಸಿದಾಗ ಕುಗ್ಗಬಾರದು. ಹಾಗೇಯೇ ಹಿಂಜರಿಯಬಾರದು. ಅದೇ ರೀತಿಯಾಗಿ ಸೋಲು ಗೆಲುವಿನ ಮೊದಲು ಮೆಟ್ಟಿಲಗಳೆಂದು ಮುನ್ನಡೆಯಬೇಕು ಎಂದು ಸಚಿವರು ಹೇಳಿದರು.
ಹುಕ್ಖೇರಿಯಲ್ಲಿ ನಡೆದ ಈ ಚುನಾವಣೆ ಸೋಲು ಅನ್ನಬಹುದು ಅಷ್ಟೇ, ಬಿಟ್ಟರೆ ಇದು ಬೆಳಗಾವಿ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿಲ್ಲ. ನಾವು ನಮ್ಮ ಕಾರ್ಯಕರ್ತರ ರಕ್ಷಣೆಗೋಸ್ಕರ ಪ್ರಚಾರ ಮಾಡಿದ್ದೇವೆ ಅಷ್ಟೇ, ನಮಗೆ ಒಂದಿಷ್ಟು ಜನ ಕೈ ಜೋಡಿಸಬೇಕಾಗಿತ್ತು. ಜೋಡಿಸದ ಕಾರಣ ಚುನಾವಣೆ ಸೋಲಾಗಿದೆ. ಒಟ್ಟಾರೆ ನಮ್ಮ ಮತಗಳನ್ನು ನಾವು ಹಾಕಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅಲ್ಲದೇ ಈ ಚುನಾವಣೆ ಹುಕ್ಕೇರಿಗಷ್ಟೇ ಸೀಮಿತ ಎಂದರು.
ನಮ್ಮ ಸೋಲಿಗೆ ಪ್ರಮುಖ ಕಾರಣವೆನೆಂದರೆ ಕೆಲವು ಕಡೆ ನಮ್ಮ ಮತಗಳು ತಿರಸ್ಕಾರಗೊಂಡಿವೆ. 9 ಮತ ಹಾಕುವಲ್ಲಿ 10 ಮತ ಹಾಕಿದ್ದಾರೆ. ಕೆಲವು ಕಡೆ 5 ಸಾವಿರ ಹಾಗೂ ಇನ್ನೊಂದು ಕಡೆ 8 ಸಾವಿರ ಮತಗಳು ತಿರಸ್ಕಾರವಾಗಿವೆ. ನಾವು ಅನೇಕ ಜನರಲ್ ಚುನಾವಣೆ ಮಾಡಿದ್ದೇವೆ. ಈಗ ಹುಕ್ಕೇರಿಯಲ್ಲಿ ನಡೆದ ವಿದ್ಯುತ್ ಸಹಕಾರಿ ಚುನಾವಣೆ ನಮಗೆ ಹೊಸದಾಗಿದ್ದು, ಎಷ್ಟು ಪ್ರಯತ್ನ ಮಾಡಬೇಕು ಅಷ್ಟೂ ಪ್ರಯತ್ನ ನಮ್ಮ ಕಡೆಯಿಂದ ಮಾಡಿದ್ದೇವೆ ಎಂದರು.
ಈ ವೇಳೆ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್ ಸೇರಿದಂತೆ ಇತರರು ಇದ್ದರು.