ಬೆಳಗಾವಿ : ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದ ಕುರಿತು ನಡೆದ ಹೋರಾಟಕ್ಕೆ ಸಂಬಂಧಿಸಿದಂತೆ ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದೇನೆ. ದಲಿತ ನಾಯಕರನ್ನು ತುಳಿಯುವ ಷಡ್ಯಂತ್ರ ನಡೆದಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಪಕ್ಷಾತೀತವಾಗಿ ದಲಿತ ನಾಯಕರನ್ನು ತುಳಿಯುವ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದ್ದು ನಾನು ಹೋರಾಟ ನಡೆಸುತ್ತೇನೆ ಎಂದರು.
ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರನ್ನು ವ್ಯವಸ್ಥಿತವಾಗಿ ಸಿಲುಕಿಸಲಾಯಿತು. ಅಬಕಾರಿ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈಗ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರನ್ನು ಷಡ್ಯಂತ್ರ ಮಾಡಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದರು.
ಕಾಂಗ್ರೆಸ್ ಸರಕಾರ ಇದ್ದರೂ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತ ಅಧಿಕಾರಿಗಳು, ನಾಯಕರ ವಿರುದ್ಧ ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದು ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.


