ಅಶೋಕ್ ಪಟ್ಟಣ ಏಟಿಗೆ ಕಂಗಾಲಾದ ವಿರೋಧಿ ಬಣ ; ಗೆದ್ದು ಬೀಗಿದ ಮಲ್ಲಣ್ಣ
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ರಾಮದುರ್ಗ ನಿರ್ದೇಶಕ ಸ್ಥಾನದ ಚುನಾವಣೆ ಕುತೂಹಲಕಾರಿ ರೀತಿಯಲ್ಲಿ ತಿರುವು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಯಾದವಾಡ ಕುಟುಂಬ ತಮ್ಮ ಶಕ್ತಿ ಪ್ರದರ್ಶಿಸಿಸಿದೆ.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಹಾಗೂ ಹಾಲಿ ಡಿಸಿಸಿ ನಿರ್ದೇಶಕ ಶ್ರೀಕಾಂತ ಢವಣ ಮಧ್ಯೆ ನೇರಾನೇರ ಹೋರಾಟ ನಡೆದಿತ್ತು.
ಕೊನೆ ಕ್ಷಣದಲ್ಲಿ ಆದ ರಾಜಕೀಯ ಬೆಳವಣಿಗೆಯಿಂದ ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿ ಹೀನಾಯ ಸೋಲು ಅನುಭವಿಸುವ ಪರಿಸ್ಥಿತಿ ಎದುರಾಯಿತು.
35 ಸದಸ್ಯ ಬಲದ ರಾಮದುರ್ಗ ಬಿಡಿಸಿಸಿ ನಿರ್ದೇಶಕ ಸ್ಥಾನದಲ್ಲಿ ಮಲ್ಲಣ್ಣ ಯಾದವಾಡ 19 ಮತ ಪಡೆದರೆ ಶ್ರೀಕಾಂತ ಢವಣ 17 ಮತ ಪಡೆಯುವಲ್ಲಿ ಯಶಸ್ವಿಯಾಗಿದರು. ಕೇವಲ ಎರಡು ಮತಗಳ ಅಂತರದಲ್ಲಿ ಮಲ್ಲಣ್ಣ ಗೆಲುವು ಸಾಧಿಸಿದ್ದಾರೆ.
ರಾಮದುರ್ಗದ ಇಷ್ಟೆಲ್ಲಾ ಬದಲಾವಣೆ ಕೇಂದ್ರಬಿಂದು ಹಾಲಿ ಶಾಸಕ ಅಶೋಕ್ ಪಟ್ಟಣ. ಡಿಸಿಸಿ ನಿರ್ದೇಶಕ ಸ್ಥಾನದ ನಾಮಪತ್ರ ವಾಪಸ್ ಪಡೆದ ಇವರು, ತಮ್ಮ ಬೆಂಬಲಿತ ಹತ್ತಕ್ಕೂ ಅಧಿಕ ಸದಸ್ಯರನ್ನು ಮಲ್ಲಣ್ಣ ಯಾದವಾಡ ಅವರಿಗೆ ಬೆಂಬಲಿಸುವಂತೆ ನೋಡಿಕೊಂಡರು.
ಈ ಮೂಲಕ ಮತ್ತೊಮ್ಮೆ ಜಾರಕಿಹೊಳಿ ಸಹೋದರರ ವಿರುದ್ಧ ಅಶೋಕ್ ಪಟ್ಟಣ ತೊಡೆತಟ್ಟಿ ಅವರ ಅಭ್ಯರ್ಥಿ ಸೋಲಿಸುವಲ್ಲಿ ಯಶಸ್ವಿಯಾದರು. ಜೊತೆಗೆ ಮತ್ತೊಮ್ಮೆ ರಾಮದುರ್ಗದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನೂ ಮಾಡಿದಂತಾಯಿತು.
ಅಡ್ಡ ಮತದಾನ : ಮಲ್ಲಣ್ಣ ಯಾದವಾಡ ಅವರಿಗೆ 20 ಸದಸ್ಯರ ಬೆಂಬಲ ವ್ಯಕ್ತವಾಗಿತ್ತು. ಆದರೆ ಇವರ ಬೆಂಬಲದ ಒಂದು ಮತ ಅಡ್ಡ ಮತದಾನವಾದ ಹಿನ್ನಲೆಯಲ್ಲಿ ಕೇವಲ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ.


