ಜ.22 ಕ್ಕೆ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡಬೇಕು : ರಮೇಶ್ ಜಾರಕಿಹೊಳಿ
ಜ. 22 ರ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಈ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಸರಕಾರ ರಜೆ ಘೋಷಿಸಬೇಕೆಂದು ವಿನಂತಿಸಿದ ಅವರು, ಇಂದಿನ ಯುವ ಪಿಳಿಗೆಗೆ ಶ್ರೀ ರಾಮರ ಆದರ್ಶಗಳು ಮಾರ್ಗದರ್ಶನವಾಗಿ ಅವುಗಳ ಆಚರಣೆಯೊಂದಿಗೆ ಅವರ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕಾಗಿ ಈ ಸತ್ಕಾರ್ಯದಲ್ಲಿ ಅವರಿಗೂ ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಕೋರಿದರು.
ಗೋಕಾಕ : ಅಯೋಧ್ಯೆಯಲ್ಲಿ 22 ರಂದು ನಡೆಯಲಿರುವ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮವನ್ನು ಜಾತಿ, ಮತ, ಪಂಥ ಮರೆತು ಐತಿಹಾಸಿಕವಾಗಿ ಆನಂದೋತ್ಸವವನ್ನಾಗಿ ಆಚರಿಸೋಣವೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಬುಧವಾರ ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ೨೨ ರಂದು ನಡೆಯಲಿರುವ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯ ಕ್ಷೇತ್ರದಲ್ಲಿ ಆಚರಿಸುವ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಈ ಧಾರ್ಮಿಕ ಕಾರ್ಯಕ್ರಮ ದೇಶದ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಪ್ರಧಾನಿ ಮೋದಿಯವರು ಕರೆ ನೀಡಿದ ದೀಪೋತ್ಸವ ಕಾರ್ಯಕ್ರಮವನ್ನು ಮನೆ, ಮಂದಿರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಚ್ಚುವದರ ಮೂಲಕ ಅತಿವಿಜೃಂಭಣೆಯಿಂದ ಆಚರಿಸೋಣ.
ದಿ.೨೧ ಮತ್ತು ೨೨ರಂದು ಕ್ಷೇತ್ರದ ಎಲ್ಲ ಗ್ರಾಮ, ಪಟ್ಟಣ, ನಗರಗಳಲ್ಲಿ ಮಠಾಧೀಶರ, ಜನಪ್ರತಿನಿಧಿಗಳ, ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಜನತೆ ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾಗಿರಿ ಎಂದು ಕೋರಿದರು.
ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸಾಗಿಸಲು ಪ್ರಧಾನಿ ಮೋದಿಯವರು ಕಾರ್ಯಪ್ರವೃತ್ತರಾಗಿದ್ದು ರಾಮರಾಜ್ಯದೊಂದಿಗೆ ಭಾರತ ದೇಶವನ್ನು ವಿಶ್ವಗುರುವನ್ನಾಗಿಸುವ ಪ್ರಧಾನಿಯವರ ಪ್ರಯತ್ನಕ್ಕೆ ನಾವೆಲ್ಲ ಕೈಜೋಡಿಸೋಣ. ಶ್ರೀರಾಮನ ಅನುಗ್ರಹದಿಂದ ಈ ಕಾರ್ಯಕ್ರಮ ವಿಶ್ವ ಮಟ್ಟದಲ್ಲಿ ಐತಿಹಾಸಿಕ ದಾಖಲೆಯಾಗಿ ಎಲ್ಲ ದೇಶದ ಪ್ರತಿನಿಧಿಗಳು, ಸಮುದಾಯದವರು ಶುಭಕೋರುತ್ತಿದ್ದಾರೆ.
ಈ ಹೋರಾಟ ಸುಮಾರು ೫೦೦ ವರ್ಷಗಳಿಂದ ನಡೆಯುತ್ತಿದ್ದು ನಾವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡುವ ಪರಿಸ್ಥಿತಿ ಮನಸ್ಸಿಗೆ ನೋವುಂಟು ಮಾಡುತ್ತಿತ್ತು. ದೇಶದ ಎಲ್ಲ ಜನತೆಗೆ ಆದರ್ಶಪ್ರಾಯರಾದ ಶ್ರೀರಾಮರ ಮಂದಿರ ಉದ್ಘಾನೆಯನ್ನು ನೋಡುವ ಭಾಗ್ಯ ನಮಗೆಲ್ಲ ದೊರೆತಿರುವದು ನಮ್ಮ ಪುಣ್ಯವಾಗಿದ್ದು ಇದನ್ನು ನಾವು ಶ್ರೀರಾಮ ನಾಮಜಪ, ಭಜನೆ, ಸತ್ಸಂಗ ಹಾಗೂ ಆರಾಧಿಸುವ ಮೂಲಕ ಆಚರಿಸುವದರೊಂದಿಗೆ ಐತಿಹಾಸಿಕ ಸಂಭ್ರಮದಲ್ಲಿ ಪಾಲ್ಗೊಳ್ಳೋಣ ಎಂದರು.
ವೇದಿಕೆಯ ಮೇಲೆ ವಿಶ್ವ ಹಿಂದು ಪರಿಷತನ ಪ್ರಮುಖ ನಾರಾಯಣ ಮಠಾಧಿಕಾರಿ, ಎಮ್ ಡಿ ಚುನಮರಿ, ಆನಂದ ಪಾಟೀಲ, ರಾಮಚಂದ್ರ ಕಾಕಡೆ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಲಕ್ಷ್ಮೀ ದೇವಿ ಜಾತ್ರಾ ಕಮೀಟಿಯ ಪ್ರಭಾಕರ ಚೌಹಾಣ ಇದ್ದರು.


