ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ಕೊಟ್ಟಿರುವೆ ನನಗೆ ಆಹ್ವಾನ ನೀಡಿಲ್ಲ : ಲಕ್ಷ್ಮಣ ಸವದಿ
ಬೆಂಗಳೂರು : ರಾಮ ಮಂದಿರ ನಿರ್ಮಾಣ ಪ್ರಾರಂಭದ ಸಂದರ್ಭದಲ್ಲಿ ಸ್ಥಳೀಯ ಹಿಂದುಪರ ಮುಖಂಡರು ನನ್ನ ಹತ್ತಿರ ಬಂದಾಗ ಮಂದಿರ ನಿರ್ಮಾಣಕ್ಕೆ ನಾನೇ ಹತ್ತು ಲಕ್ಷ ಕೊಟ್ಟಿದ್ದರು ನನಗೇ ಆಹ್ವಾನ ನೀಡಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು. (Ram Janmabhoomi)
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸ್ಥಳೀಯ ಆರ್ಎಸ್ಎಸ್ ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ, ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ. ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವದಿ ಹೇಳಿದರು.
ರಾಮ ಮಂದಿರಕ್ಕಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಆದರೆ, ಅವರೇ ಈಗ ರಾಮ ಮಂದಿರ ಉದ್ಘಾಟನೆಗೆ ಬರಬಾರದು ಅಂತ ಸಂದೇಶ ಕೊಡೋದು ಎಷ್ಟು ಸರಿ? ರಾಮ ಮಂದಿರ ಆಗೋಕೆ ಆಡ್ವಾಣಿ ಕಾರಣ. ಈಗ ಅವರನ್ನೇ ಬರಬಾರದು ಎಂದು ಹೇಳುವ ಬಿಜೆಪಿಯವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದರು.
ಆಡ್ವಾಣಿ ಅವರನ್ನೇ ಬರಬೇಡಿ ಎಂದು ಹೇಳಿದ ಮೇಲೆ ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದು ಅಲ್ಲ. ಬಿಜೆಪಿ ಅವರು ಮೊದಲು ಹಿಂದು ಹಿಂದು ಎಂದು ಹೇಳುತ್ತಾರೆ. ಯಾವಾಗ ಅಧಿಕಾರ ಬರುತ್ತದೋ ಆಗ ನಾವು ಮುಂದು, ನೀವು ಹಿಂದೆ ಅಂತಾರೆ ಎಂದು ಲಕ್ಷ್ಮಣ ಸವದಿ ಟೀಕಿಸಿದರು.


