ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ; ಪ್ರಭಾವತಿ ಫಕೀರಪುರ ಅಧಿಕಾರ ಸ್ವೀಕಾರ

ಸವದತ್ತಿ : ತಾಯಿ ಯಲ್ಲಮ್ಮನ ಸೇವೆ ಮಾಡುವ ಮಹಾದಾಸೆ ಇಂದು ಈಡೇರಿದೆ. ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತೇನೆ. ಎಲ್ಲರ ಸಹಕಾರ ಅತ್ಯಗತ್ಯ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಭಾವತಿ ಫಕೀರಪುರ ಹೇಳಿದರು.
ಯಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿ ವಿಶ್ವವಾಣಿಯೊಂದಿಗೆ ಮಾತನಾಡಿ, ಭಕ್ತಾದಿಗಳ ಮೂಲ ಸೌಕರ್ಯ ಕಲ್ಪಿಸುವದು, ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗುವದು.
ಆಡಳಿತಾತ್ಮಕ ಕಾರ್ಯಗಳಲ್ಲಿ ಪಾರದರ್ಶಕತೆ ಕಾಪಾಡಲಾಗುವುದು. ಶಾಸಕರ, ಎಲ್ಲ ಅಧಿಕಾರಿಗಳ, ಸಿಬ್ಬಂದಿಗಳ ಜೊತೆ ಚರ್ಚಿಸಿ ಮಾಹಿತಿ ಸಂಗ್ರಹಿಸಲಾಗುವದು. ದೇವಸ್ಥಾನದಲ್ಲಿ ಸಲಹಾ ಪೆಟ್ಟಿಗೆ ವ್ಯವಸ್ಥೆಯಿದ್ದು, ಸಲಹೆ ನೀಡುವ ಮೂಲಕ ಭಕ್ತಾದಿಗಳು ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಬೇಕು.
ವ್ಯಾಪಾರಸ್ತರ ಅನುಕೂಲಕ್ಕಾಗಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಿ ಕೊಡಲಾಗುವದು. ದೇವಸ್ಥಾನ ಅಭಿವೃದ್ಧಿಗೆ ಸದ್ಯದಲ್ಲೇ 215 ಕೋಟಿ ಕಾಮಗಾರಿ ಪ್ರಾರಂಭವಾಗಲಿದ್ದು ಭಕ್ತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸಿಗಲಿದೆ ಎಂದರು.
ಸರ್ಕಾರದ ಆದೇಶದಂತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಪ್ರಭಾವತಿ ಫಕೀರಪುರ ಅವರಿಗೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದ್ದು, ಶುಕ್ರವಾರ ಅಧಿಕೃತವಾಗಿ ಕರ್ತವ್ಯ ಸ್ವೀಕರಿಸಿದರು.


