ನಿಡಸೋಶಿ ಮಠದಲ್ಲಿ ಗದ್ದುಗೆ ಗುದ್ದಾಟ ; ಉಪವಾಸ ಕುಳಿತ ಶ್ರೀಗಳು
ಹುಕ್ಕೇರಿ : ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಪರಂಪರೆ ಹೊಂದಿರುವ ಮಠಗಳಲ್ಲಿ ಒಂದಾದ ಸುಪ್ರಸಿದ್ಧ ನಿಡಸೋಶಿ ಗ್ರಾಮದ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಆಸ್ತಿಗಾಗಿ ಕಲಹ ಏರ್ಪಟ್ಟಿದೆ. ಶ್ರೀಮಠದ ಹಿರಿಯ ಶ್ರೀಗಳು ನನಗೆ ಅಧಿಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮಿಜಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಹುಕ್ಕೇರಿ ತಾಲೂಕಿನ ನಿಡಸೋಶಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ದಶಕಗಳಿಂದ ಮಠದ ಹಿರಿಯ ಶ್ರಿಗಳಾದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತಾ ಬಂದಿದ್ದರು. ಸಧ್ಯ ಮಠದ ಕಿರಿಯ ಸ್ವಾಮೀಜಿಗಳಾದ ಯಾಗಿದ್ದ ನಿಜಲಿಂಗೇಶ್ವರ ಸ್ವಾಮೀಜಿ ಆಸ್ತಿ ನೀಡಿ ಮಠದ ಕೆಲಸಕ್ಕೆ ಅನುವು ಮಾಡಿಕೊಡುವಂತೆ ತಕರಾರು ತಗೆದಿದ್ದಾರೆ.
ಕಳೆದ 2023 ರಲ್ಲಿ ವಯೋಸಹಜ ಅನಾರೋಗ್ಯದ ಕಾರಣಕ್ಕೆ
ಮಠದ ಪೀಠಾಧಿಪತಿ ಆಗಿರುವ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಠಕ್ಕೆ ಯುವ ಸನ್ಯಾಸಿಯನ್ನು ಪೀಠಾಧಿಪತಿಯಾಗಿ ಮಾಡುವ ಉದ್ದೇಶದಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ಸ್ವಾಮೀಜಿಯಾಗಿದ್ದ ನಿಜಲಿಂಗೇಶ್ವರ ಶ್ರೀಗಳನ್ನು ಕರೆತಂದಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ಮುಂದಿರ ಉತ್ತರಾಧಿಕಾರಿಯಾಗಿ ಮಾಡುವುದರ ಜೊತೆಗೆ ಸಂಪೂರ್ಣ ವ್ಯವಹಾರವನ್ನು ಬಿಟ್ಟುಕೊಡುವ ಮಾತುಕತೆ ನಡೆದಿತ್ತು.
ಆದರೆ ದಿನಗಳೆದಂತೆ ನೂತನ ಶ್ರೀಗಳಾದ ನಿಜಲಿಂಗೇಶ್ವರನ್ನು ಹಿರಿಯ ಶ್ರೀಗಳು ದೂರ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ರಾಮಕೃಷ್ಣ ಆಶ್ರಮ ಬಿಟ್ಟು ಕರೆತರುವ ಸಂದರ್ಭದಲ್ಲಿ ನನಗೆ ಕೊಟ್ಟ ಮಾತಿನಂತೆ ಹಿರಿಯ ಶ್ರೀಗಳು ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡುತ್ತಿಲ್ಲ. ಜೊತೆಗೆ ಮಠದ ವ್ಯವಹಾರ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು ಭಕ್ತರ ಮುಂದೆ ನನ್ನ ವಿರುದ್ಧ ಹೇಳಿಕೆ ಕೊಡುವ ಮೂಲಕ ನನ್ನನ್ನು ಕೆಟ್ಟದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿರಿಯ ನಿಜಲಿಂಗೇಶ್ವರ ಶ್ರೀಗಳು ಉಪವಾಸ ಮುಂದುವರಿಸಿದ್ದಾರೆ.
ಉಪವಾಸ ನಿರತ ಕಿರಿಯ ಶ್ರೀಗಳ ಆರೋಗ್ಯ ಬಿಗಡಾಯಿಸುತ್ತಿದ್ದು ಭಕ್ತರಲ್ಲಿ ಆತಂಕ ಮನೆಮಾಡಿದೆ. ಮಧ್ಯೆ ಶ್ರೀಮಠದ ಹಿರಿಯ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಜಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು. ಕಿರಿಯ ಶ್ರೀಗಳನ್ನು ಪೀಠಾಧಿಪತಿ ಮಾಡಲು ಕರೆತಂದ ನಂತರ ನನ್ನನ್ನು ವಿರೋಧದಿಂದ ಕಾಣುತ್ತಿದ್ದಾರೆ. ಕಿರಿಯ ಶ್ರೀಗಳು ಭಕ್ತರೊಂದಿಗೆ ಆತ್ಮೀಯವಾಗಿ ಬೆರೆತರೇ ಮುಂದೆ ಅಧಿಕಾರ ಕೊಡೋದರ ಬಗ್ಗೆ ನೋಡಬಹುದು. ಕಾನೂನು ಹೋರಾಟ ನಡೆಸಿದರೆ ಮೂವತ್ತು ವರ್ಷಗಳವರೆಗೆ ಕಾಯುವ ಪರಿಸ್ಥಿತಿ ಬರಬಹುದು ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಮಠಗಳಲ್ಲಿ ಒಂದಾದ ನಿಡಸೋಶಿ ಮಠದಲ್ಲಿ ಸಧ್ಯ ಆಸ್ತಿಗಾಗಿ ಶ್ರೀಗಳ ನಡುವಿನ ಗುದ್ದಾಟ ಬೀದಿಗೆ ಬಿದ್ದುದ್ದು ಮಠದ ಭಕ್ತರನ್ನು ಕಂಗೆಡಿಸಿದೆ. ಈ ಮಧ್ಯೆ ಕೆಲ ರಾಜಕೀಯ ನಾಯಕರ ಸ್ವಾಮೀಜಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.


