ಸವದಿಗೆ ಸಡ್ಡು ಹೊಡೆದ ಬಿಜೆಪಿ ಮುಖಂಡರು ; ಏ. 29 ಕ್ಕೆ ಕುಡಚಿಗೆ ಮೋದಿ
ಬೆಳಗಾವಿ : ರಾಜ್ಯದಲ್ಲಿ ಸಧ್ಯ ಚುನಾವಣಾ ಕಾವು ಜೋರಾಗಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ವಿರುದ್ಧ ಬಿಜೆಪಿ ನಾಯಕರು ತೊಡೆ ತಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಕುಡಚಿ ವಿಧಾನಸಭಾ ವ್ಯಾಪ್ತಿಯ ಕೋಳಿಗುಡ್ಡ ಗ್ರಾಮದ ಹೊರ ವಲಯದಲ್ಲಿ ನರೇಂದ್ರ ಮೋದಿ ಸಮಾವೇಶ ಆಯೋಜಿಸಲಾಗಿದೆ.
ಏಪ್ರಿಲ್ 29 ರ ಶನಿವಾರ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಹೊರವಲಯದಲ್ಲಿ ನಡೆಯುವ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಥಣಿ, ಕುಡಚಿ, ರಾಯಬಾಗ, ತೇರದಾಳ, ಹುಕ್ಕೇರಿ, ಜಮಖಂಡಿ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಸಮಾವೇಶದ ಲಾಭ ಆಗುವಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಅಥಣಿ ಮೇಲೆ ಪರಿಣಾಮ ಸಾಧ್ಯತೆ : ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಲಕ್ಷ್ಮಣ ಸವದಿ ಪ್ರತಿನಿಧಿಸುವ ಅಥಣಿ ಕ್ಷೇತ್ರದ ಜನರ ಮೇಲೆ ಪ್ರಧಾನಿ ನರೇಂದ್ರ ಮೋದಿ ಆಗಮನ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸವದಿ ಸೋಲಿಸಲು ಬಿಜೆಪಿ ನಾಯಕರು ಮೋದಿ ಅಸ್ತ್ರ ಪ್ರಯೋಗ ಮಾಡಿದ್ದು ವಿಶೇಷ.


