ಮೈಸೂರು ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಶಾಲಾ ಬಸ್ ಪಲ್ಟಿ ; 10 ಮಕ್ಕಳಿಗೆ ಗಾಯ
ಮೈಸೂರು : ಚಾಲಕನ ಅಜಾಗರೂಕತೆಯಿಂದಾಗಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಗಾಯಾಳು ಮಕ್ಕಳಿಗೆ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಗರದ ಬಿ.ಎನ್. ರಸ್ತೆಯ ಫೌಂಟೇನ್ ವೃತ್ತದ ಸಮೀಪ ಈ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಶಾಂತಿ ನಿಕೇತನ ಶಾಲೆಯ 36 ಮಕ್ಕಳು ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದು, ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸ್ ತೆರಳುವಾಗ ನಡೆದ ಘಟನೆ ಸಂಭವಿಸಿದೆ.
ಶಾಲಾ ಮಕ್ಕಳಿದ್ದ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಈ ವೇಳೆ ನೆರವಿಗೆ ಧಾವಿಸಿದ ಸಾರ್ವಜನಿಕರು, ಗಾಯಾಳು ಮಕ್ಕಳನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಭೇಟಿ, ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ.


