ಕಾಂಗ್ರೆಸ್ ಶಾಸಕರ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..? ಭುಗಿಲೆದ್ದ ಆಕ್ರೋಶ
ಮಡಿಕೇರಿ : ಮಡಿಕೇರಿ ಶಾಸಕ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಎ. ಎಸ್ ಪೊನ್ನಣ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ನನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ(32) ಎಂಬವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಸಮಸ್ಯೆಗಳು ಎನ್ನುವ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ ಆಗಿದ್ದ ವಿನಯ್ ಮರಣ ಪತ್ರ ಬರೆದಿಟ್ಟಿದ್ದರು.
ರಾಜಕೀಯ ಪ್ರೇರಿತ ಎಫ್.ಐ.ಆರ್.ನಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣ ಪತ್ರ ಬರೆದಿಟ್ಟು, ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಸಮಯದ ಹಿಂದೆ ಶಾಸಕ ಎ.ಎಸ್.ಪೊನ್ನಣ್ಣ ಬಗ್ಗೆ ವಿನಯ್ ಸೋಮಯ್ಯ ಅಪಹಾಸ್ಯ ಮಾಡಿ ವಾಟ್ಸ್ ಆ್ಯಪ್ ಪೋಸ್ಟ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನ್ನೀರಾ ಮೈನಾ ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.
ಇದೇ ಕಾರಣಕ್ಕೆ ಮೂವರ ಕಿರುಕುಳದಿಂದ ನೊಂದು ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವಿನಯ್ ಅವರ ಸಹೋದರ ಜೀವನ್ ಸೋಮಯ್ಯ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ FIRನಿಂದ ಮನನೊಂದಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ಸದ್ಯ ವಿನಯ್ ಸೋಮಯ್ಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಇನ್ನು ವಿನಯ್ ಸೋಮಯ್ಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದು, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ ಎಂದರು.
ಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದ್ದು, ಈ ಪ್ರಕರಣ ಪಾರದರ್ಶಕವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.


