ಲಾಕಪ್ ಡೆತ್ – 9 ಪೊಲೀಸರಿಗೆ ಗಲ್ಲು ಶಿಕ್ಷೆ, ಹೃದಯವೇ ನಡುಗುತ್ತದೆ ಎಂದ ಜಡ್ಜ್..!

ಮಧುರೈ : ತಂದೆ, ಮಗನ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ ನೀಡಿ ಇಬ್ಬರ ಸಾವಿಗೆ ಕಾರಣರಾಗಿದ್ದ ಇನ್ಸ್ಪೆಕ್ಟರ್ ಸೇರಿ 9 ಜನ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿ ಮಧುರೈ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
2020 ರ ಜೂನ್ 19 ರಂದು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ನಿಗದಿತ ಸಮಯಕ್ಕಿಂತ ಜಾಸ್ತಿ ಹೊತ್ತು ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಆರೋಪದ ಮೇಲೆ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರನ್ನು ಮಧುರೈ ಪೊಲೀಸರು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಬಂಧಿತರನ್ನು ರಾತ್ರಿಯಿಡೀ ಪೊಲೀಸರು ಚಿತ್ರಹಿಂಸೆ ನೀಡಿದ್ದರು. ಬೆತ್ತಲೆಗೊಳಿಸಿ ಅಮಾನವೀಯ ಹಲ್ಲೆ ಮಾಡಿದ್ದರು. ಪೊಲೀಸರ ಕ್ರೌರ್ಯಕ್ಕೆ ತಂದೆ ಮಗ ಇಬ್ಬರು ಒಂದೇ ದಿನದ ಅಂತರದಲ್ಲಿ ಸಾವಣಪ್ಪಿದ್ದರು. ಇದು ಲಾಕಪ್ ಡೆತ್ ಎಂಬ ಸುದ್ದಿ ಎಲ್ಲೆಡೆ ಹರಿದಾಡತೊಡಗಿತು.
ತಮ್ಮ ಕುಟುಂಬಕ್ಕೆ ನ್ಯಾಯ ನೀಡುವಂತೆ ಆಗ್ರಹಿಸಿ ಪೊಲೀಸ್ ದೌರ್ಜನ್ಯದ ವಿರುದ್ಧ ಕುಟುಂಬ ಪ್ರತಿಭಟನೆ ನಡೆಸಿತ್ತು. ಇದಾದ ನಂತರ ಮದ್ರಾಸ್ ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಿತ್ತು. ಈ ವೇಳೆ 100 ಕ್ಕೂ ಅಧಿಕ ಸಾಕ್ಷಿ ವಿಚಾರಣೆ ಮಾಡಲಾಗಿತ್ತು. ಆರು ವರ್ಷಗಳ ನಂತರ ಕೊನೆಗೂ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ.
ಪ್ರಕರಣದ ತೀರ್ಪು ನೀಡಿರುವ ನ್ಯಾಯಾಧೀಶ ಜಿ. ಮುತ್ತುಕುಮಾರನ್ ಅವರು ಅಪರೂಪದಲ್ಲಿ, ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿ ಪೊಲೀಸರ ಕ್ರೌರ್ಯದ ಕುರಿತು ನೋವು ಹೊರಹಾಕಿದ್ದಾರೆ. ಅಮಾಯಕರ ಮೇಲೆ ನಡೆಸಿದ ಹಲ್ಲೆ ಓದಿದರೆ ಹೃದಯ ನಡುಗುತ್ತದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಶ್ರೀಧರ, ಸಬ್ ಇನ್ಸ್ಪೆಕ್ಟರ್ ಬಾಲಕೃಷ್ಣ & ರಘು ಗಣೇಶ್, ಪೇದೆಗಳಾದ ಮುರುಗನ್, ಸ್ವಾಮುದೊರೈ, ಮುತ್ತುರಾಜ, ಚೆಲ್ಲದೊರೈ, ಥಾಮಸ್ ಪ್ರಾನ್ಸಿಸ್ ಹಾಗೂ ವೇಲು ಎಂಬ 9 ಜನರಿಗೆ ಗಲ್ಲಾಗಿದ್ದು ಈ ವೇಳೆ ನಿವಾರಣೆ ಸಂದರ್ಭದಲ್ಲಿ ಓರ್ವ ಮೃತಪಟ್ಟಿದ್ದಾನೆ.


