ಲೇಡಿ ರೌಡಿ, ಪೋಲಿ ಪೊಲೀಸ್ ; ಮಿಡ್ ನೈಟ್ ಮಸಾಲಾ ಮೆಸೇಜ್..!
ಬೆಂಗಳೂರು : ನಗರದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್ ಒಬ್ಬರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಸಿಟಿ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿರುವ ದೂರುದಾರೆ, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರುದಾರೆಯ ಹೇಳಿಕೆಯ ಪ್ರಕಾರ, ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣ ಕಚೇರಿ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ವೈಯಕ್ತಿಕವಾಗಿ ಅಸಹಜವಾಗಿ ಸಂಬೋಧಿಸಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಗಳಿಗೆ ಸಂಬಂಧಿಸಿದಂತೆ ವಾಟ್ಸಪ್ ಮೂಲಕ ಕಳುಹಿಸಲಾದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಹಾಗೂ ಮಾತುಕತೆಗಳ ದಾಖಲೆಯನ್ನು ದೂರುದಾರೆ ಆಯುಕ್ತರ ಕಚೇರಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ, ಇಬ್ಬರ ನಡುವಿನ ಮಾತುಕತೆಯಾಗಿದೆ ಎಂದು ಹೇಳಲಾಗಿರುವ ಆಡಿಯೋ ದಾಖಲೆಗಳನ್ನೂ ಸಾಕ್ಷ್ಯವಾಗಿ ನೀಡಿದ್ದಾರೆ.
ಪ್ರಕರಣವನ್ನು ಬಹಿರಂಗಪಡಿಸಿದರೆ ತನ್ನ ಹಾಗೂ ಮಕ್ಕಳಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ದೂರಿದ್ದಾರೆ. ಹಲವಾರು ಬಾರಿ ಕರೆ ಮಾಡಿ ಒತ್ತಡ ಹೇರುವ ಪ್ರಯತ್ನವೂ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಕೆಯಾಗಿರುವ ಈ ದೂರಿನ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಷಯವನ್ನು ಪರಿಶೀಲಿಸುವ ಸಾಧ್ಯತೆ ಇದೆ. ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರೆ ಮನವಿ ಮಾಡಿದ್ದಾರೆ.


