ಬೆಳಗಾವಿ : “ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ಸಂಜಯ್ ಪಾಟೀಲ್ (Sanjay patil ) ಅವರಿಗೆ ಧೈರ್ಯವಿದ್ದರೆ 5 ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ,” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi hebalkar ) ನೇರ ಸವಾಲು ಹಾಕಿದ್ದಾರೆ.

ತಾಲೂಕಿನ ಮಣ್ಣೂರು ಗ್ರಾಮದಲ್ಲಿ ‘ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್’ (BDCC) ವತಿಯಿಂದ ಮಂಜೂರಾದ 50 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

5 ಸಾವಿರ ಕೋಟಿ ರೂ. ಆರೋಪಕ್ಕೆ ಖಡಾಖಂಡಿತ ತಿರುಗೇಟು : ಸಂಜಯ್ ಪಾಟೀಲ್ ಅವರ ಆರೋಪಗಳನ್ನು ತೀವ್ರವಾಗಿ ಖಂಡಿಸಿದ ಅವರು, “800 ಕೋಟಿ ರೂಪಾಯಿ ಅಕ್ರಮ ಎಸಗಿದ ಕಾರಣಕ್ಕೆ ವಿಜಯ್ ಮಲ್ಯ ದೇಶ ತೊರೆದು ಲಂಡನ್‌ಗೆ ಓಡಿಹೋದರು. ಹಾಗಿರುವಾಗ ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಮಾಡಲು ಹೇಗೆ ಸಾಧ್ಯ? 2017ರಲ್ಲಿ ನಾನು 10 ಕೋಟಿ ವೆಚ್ಚದಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದಾಗ, ಸಂಜಯ್ ಪಾಟೀಲ್ ಅವರೇ ನನ್ನ ವಿರುದ್ಧ ದೂರು ನೀಡಿ ಇನ್‌ಕಮ್ ಟ್ಯಾಕ್ಸ್ (IT) ದಾಳಿ ಮಾಡಿಸಿದ್ದರು. ಎರಡು ಬಾರಿ ಶಾಸಕರಾಗಿದ್ದರೂ ಅವರು ಜನರಿಗಾಗಿ ಏನನ್ನೂ ಮಾಡಲಿಲ್ಲ. ನಾನು ಶಾಸಕಿಯಾಗಿ ಮಾತ್ರವಲ್ಲ, ಈ ಭಾಗದ ಮಗಳಾಗಿ ಕೆಲಸ ಮಾಡುತ್ತಿದ್ದೇನೆ; ಇದನ್ನು ಸಹಿಸಿಕೊಳ್ಳಲಾಗದೆ ಐಟಿ ಅಥವಾ ಇಡಿ (ED) ದಾಳಿಯ ಬೆದರಿಕೆ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.”

ಗೃಹಲಕ್ಷ್ಮಿ ಮತ್ತು ಮಹಾರಾಷ್ಟ್ರದ ‘ಲಾಡ್ಕಿ ಬಹಿನ್’ ಯೋಜನೆ ಪ್ರಸ್ತಾಪ : ಗೃಹಲಕ್ಷ್ಮಿ ಯೋಜನೆ ಹಣದ ಕುರಿತು ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, “ಎರಡು ತಿಂಗಳು ಹಣ ಬಂದಿಲ್ಲ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 25 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಹಣ ತಲುಪಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗುವುದು ಸ್ವಲ್ಪ ತಡವಾಗಬಹುದು. ಇದುವರೆಗೆ ಪ್ರತಿಯೊಬ್ಬ ಮಹಿಳೆಗೆ ಸುಮಾರು 70 ಸಾವಿರ ರೂಪಾಯಿವರೆಗೆ ಅನುಕೂಲವಾಗಿದೆ.”

ಮಹಾರಾಷ್ಟ್ರದ ಉದಾಹರಣೆ ನೀಡಿದ ಅವರು, “ಕರ್ನಾಟಕ ಸರ್ಕಾರದ ವಿರುದ್ಧ ಬೆಟ್ಟು ಮಾಡುವ ಮುನ್ನ ವಿರೋಧ ಪಕ್ಷದವರು ಮಹಾರಾಷ್ಟ್ರದ ‘ಲಾಡ್ಕಿ ಬಹಿನ್’ ಯೋಜನೆಯ ಕಥೆ ಏನಾಗಿದೆ ಮತ್ತು ಅಲ್ಲಿ ಎಷ್ಟು ಕಂತುಗಳನ್ನು ನೀಡಿದ್ದಾರೆ ಎಂಬುದನ್ನು ಯೋಚಿಸಲಿ. ನಾವು ಕೆಲಸ ಮಾಡುವವಳು, ಆದರೆ ಇವರು ಮನೆಯಲ್ಲೇ ಕುಳಿತು ವಾಟ್ಸಾಪ್‌ನಲ್ಲಿ ಆರೋಪ ಮಾಡುವವರು,” ಎಂದು ತಿರುಗೇಟು ನೀಡಿದರು.