ಕಣ್ಣೀರು ಹಾಕಿದ ಅಥಣಿ ಪಿಎಸ್ಐ ; ಕೃತಜ್ಞತೆ ಸಲ್ಲಿಸಿದ ಸಚಿವೆ ಹೆಬ್ಬಾಳಕರ್..!
ಬೆಳಗಾವಿ : ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಕೇಸ್ ನ ತನಿಖೆ ನಡೆಸಿದ್ದ ಪ್ರಸ್ತುತ ಅಥಣಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಅವರು ಘಟನೆ ಕುರಿತು ಕಣ್ಣೀರು ಹಾಕಿದ್ದು ಸಾಕಷ್ಟು ವೈರಲ್ ಆಗಿತ್ತು.
ಬಾಲಕಿ ಆತ್ಮಕ್ಕೆ ಶಾಂತಿ ಕೋರುವ ಸಭೆಯಲ್ಲಿ ಘಟನೆ ಭೀಕರತೆ ನೆನೆದು ಅಂದು ತನಿಖೆ ನಡೆಸಿದ್ದ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಸಧ್ಯ ಈ ಘಟನೆಗೆ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಯ ಮಾನವೀಯ ಹೃದಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಯಬಾಗ ತಾಲೂಕಿನಲ್ಲಿ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, 10 ಲಕ್ಷ ರೂ ದಂಡ ವಿಧಿಸಿದ ಸುದ್ದಿ ತಿಳಿದು ಮನಸ್ಸಿಗೆ ಸಮಾಧಾನವಾಯಿತು. ಜೊತೆಗೆ, ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಬಾಲಕಿಯ ಮೇಲಿನ ಕ್ರೌರ್ಯತೆ ನೆನೆದು ಕಣ್ಣೀರು ಹಾಕಿದ ಘಟನೆ ಮನಕಲಕಿತು.
ಪೊಲೀಸರ ಇಂತಹ ಮಾನವೀಯತೆ, ಸರಕಾರಿ ವಕೀಲರ ನಿಷ್ಠೆ, ನ್ಯಾಯಾಧೀಶರ ಕಠಿಣ ತೀರ್ಪುಗಳಿಂದಾಗಿ ಹತ್ಯೆಗೀಡಾದ ಅಮಾಯಕ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಭಾವಿಸುತ್ತೇನೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆಯಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾದ ಎಲ್ಲರಿಗೆ, ಸಮರ್ಥ ವಾದ ಮಂಡಿಸಿದ ವಕೀಲರಿಗೆ, ತೀರ್ಪು ನೀಡಿದ ನ್ಯಾಯಾಧೀಶರಿಗೆ ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ. – ಲಕ್ಷ್ಮೀ ಆರ್.ಹೆಬ್ಬಾಳಕರ್

