ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ ; ಯಾರು ಈ ವ್ಯಕ್ತಿ….?
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ರಾಜ್ಯಪಾಲರ ಹೆಸರಲ್ಲಿ ನಕಲಿ ಸಹಿ ಮಾಡಿರುವ ದಾಖಲೆ ಸೃಷ್ಟಿಸಿ ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರು. ವಂಚನೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೇ ದಾಖಲೆ ಸಮೇತ ತಮ್ಮ ಇಲಾಖೆ ಅಧಿಕಾರಿಗಳು ಸೇರಿದಂತೆ ತಮ್ಮ ಸಹಿ ನಕಲಿ ಮಾಡಿ ಸೃಷ್ಟಿಸಿರುವ ಸುಳ್ಳು ದಾಖಲೆಗಳ ಸಮೇತ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಲಕ್ಷಾಂತರ ರು. ಹಣ ಕಳೆದುಕೊಂಡು ವಂಚನೆಗೆ ಒಳಗಾದವರು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಮಂಜುನಾಥ ಮಲ್ಲಸರ್ಜ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೈಲಹೊಂಗಲ ತಾಲೂಕಿನ ನೇಗಿನಾಳ ಗ್ರಾಮದ ವಿಠ್ಠಲ ಪಡದಪ್ಪನವರ ಎಂಬಾತ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬೆಳಗಾವಿಯ ದಾಸ್ತಿಕೊಪ್ಪ ಗ್ರಾಮದ ಮಂಜುನಾಥ ಮಲ್ಲಸರ್ಜ ಎಂಬಾತ ನೌಕರಿ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ ಕಾವ್ಯಾ ಯಳ್ಳೂರು ಎಂಬುವವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ದಾಖಲಾದ ಪ್ರಕರಣದಲ್ಲಿ ಆರೋಪಿ ಮಂಜುನಾಥ ಎಂಬಾತ 15 ಕ್ಕೂ ಅಧಿಕ ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಹುದ್ದೆ ಭರ್ತಿ ಮಾಡುವುದಾಗಿ ಹೇಳಿ ಸುಮಾರು 32 ಲಕ್ಷ ರೂ. ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
*****
ವಂಚನೆ ಪ್ರಕರಣ ಕುರಿತು ತನಿಖೆ ಹೆಬ್ಬಾಳಕರ್ ಆಗ್ರಹ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ತಮ್ಮ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಹಣ ವಸೂಲಿ ಮಾಡಿರುವ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ದಾಖಲಿ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ನನ್ನ ಹಾಗೂ ಇಲಾಖೆಯ ಆಪ್ತ ಶಶಾಖೆಯ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲ ವ್ಯಕ್ತಿಗಳು ಹಣ ವಸೂಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಸಾಕ್ಷ್ಯಾಧಾರಗಳನ್ನು ನೀಡಿದ್ದೇನೆ. ನಕಲಿ ಸಹಿ ಮಾಡಿ ನೇಮಕಾತಿ ಆದೇಶ ವಿತರಿಸಿದ್ದು ಪ್ರಕರಣದ ಕುರಿತು ತನಿಖೆ ಕೈಗೊಳ್ಳುವಂತೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್ ಅವರಿಗೆ ಮನವಿ ಮಾಡಿದ್ದಾರೆ.


