ನಾನು ಮಲ್ಲಿಗೆ ಹೂವು ಇದ್ದಂತೆ ; ಪರಿಮಳ ತಡೆಯಲು ಸಾಧ್ಯವಿಲ್ಲ : ಲಕ್ಷ್ಮಣ ಸವದಿ
ಅಥಣಿ : ನಾನು ಮಲ್ಲಿಗೆ ಹೂವು ಇದ್ದಂತೆ, ಇನ್ಯಾವುದೇ ಹೂವು ಮಲ್ಲಿಗೆಯ ಪರಿಮಳವನ್ನು ಕುಂದಿಸಲು ಸಾಧ್ಯವಿಲ್ಲ. ಹಾಗೆ ಯಾರೇ ವಿರೋಧಿಗಳು ನನ್ನ ಪ್ರಭಾವವನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಪೇಕ್ಸ್ ಬ್ಯಾಂಕಿನ ನಿರ್ದೇಶಕ ಸ್ಥಾನ ತಮ್ಮ ಕೈತಪ್ಪಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು. ನಾನು ಅಪೇಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನಿರ್ದೇಶಕನಾಗಬೇಕು ಎಂದು ನಾನು ಅಪೇಕ್ಷೆ ಪಟ್ಟಿರಲಿಲ್ಲ.
ಅದು ನನ್ನ ಕೈ ತಪ್ಪುವ ಪ್ರಶ್ನೆ ಬರುವುದಿಲ್ಲ. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರಲ್ಲ, ಇಲ್ಲಿ ನನಗೆ ಸಿಗುವ ಅವಕಾಶಗಳನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ನನ್ನ ಪ್ರಭಾವವನ್ನ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕೃಷ್ಣಾ ನದಿ ತೀರದ ಸುಮಾರು 20 ಹಳ್ಳಿಗಳ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕುರಿತು ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಕೃಷ್ಣಾ ನದಿ ತೀರದ ನರಿ ಸಂತ್ರಸ್ತರು ಸವಳು ಜವಳು ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಏಳು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ನಂತರ ಅವರಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು. ಮುಂಬರುವ ದಿನಗಳಲ್ಲಿ ಇನ್ನುಳಿದ ಹಳ್ಳಿಗಳ ಸ್ಥಳಾಂತರಕ್ಕೆ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಸ್ಥಳ ಗುರುತಿಸಲಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದೆ ಎಂದರು.


