ಮಾತೇ ಮುಳುವಾಯ್ತಾ ಗೋಕಾಕ್ ಸಾಹುಕಾರಗೆ…? ಅಥಣಿಯಲ್ಲಿ ನಾನೇ ಕಿಂಗ್ ಎಂದು ಸಾಬೀತುಪಡಿಸಿದ ಸವದಿ…!

ಬೆಳಗಾವಿ : ನೇರವಾಗಿ ಮಾತಾಡುವ ಮೂಲಕ ತೀರಾ ವೈಯಕ್ತಿಕ ವಾಗ್ದಾಳಿ ನಡೆಸುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಥಣಿಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸವದಿ ಬಣ ಕ್ಲೀನ್ ಸ್ವಿಫ್ ಮಾಡುವ ಮೂಲಕ ಮತ್ತೊಮ್ಮೆ ಅಥಣಿಗೆ ನಾನೇ ಕಿಂಗ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಧ್ಯ ರಮೇಶ್ ಜಾರಕಿಹೊಳಿ ಬೆಂಬಲಿತ, ಮಾಜಿ ಶಾಸಕರಾದ ಮಹೇಶ್ ಕುಮಠಳ್ಳಿ, ಶಹಾಜಾನ್ ಡೋಂಗರಗಾವ, ಗಜಾನನ ಮಂಗಸೂಳಿ ಸೇರಿದಂತೆ ಅನೇಕರು ಕಾರ್ಖಾನೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. ಈ ನಡುವೆ ಶಾಸಕ ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರದಲ್ಲಿ ಆಡಿದ ಮಾತೇ ಸೋಲಿಗೆ ಕಾರಣವಾಯಿತು ಎಂಬ ಚರ್ಚೆ ಜೋರಾಗಿದೆ.
ಬಹಿರಂಗ ವೇದಿಕೆಯಲ್ಲಿ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಅನವಶ್ಯಕ ಪದಬಳಕೆ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದನ್ನೇ ಜನರ ಮುಂದೆ ಇಡುವಲ್ಲಿ ಯಶಸ್ವಿಯಾದ ಲಕ್ಷ್ಮಣ ಸವದಿ ಬಣ, ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳ ಪೈಕಿ ಒಂದು ನೇರ ಆಯ್ಕೆಯಾದರೆ ಉಳಿದ 13 ರಲ್ಲಿ ಒಂದು ಅವಿರೋಧ ಆಯ್ಕೆಯಾಗಿತ್ತು. ಇನ್ನುಳಿದ 12 ಸ್ಥಾನಗಳನ್ನು ಶಾಸಕ ಲಕ್ಷ್ಮಣ ಸವದಿ ಬಣ ಗೆಲ್ಲುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದೆ.


