ಬಾವಿಗೆ ಹಾರಿದ ಮಹಿಳೆ- ರಕ್ಷಣೆಗೆ ತೆರಳಿದ ಅಗ್ನಿಶಾಮಕ ಅಧಿಕಾರಿ ಸೇರಿ ಮೂವರು ದುರ್ಮರಣ!
ತಿರುವನಂತರಪುರಂ: ಬಾವಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಸೇರಿದಂತೆ ಒಟ್ಟು ಮೂವರು ದಾರುಣವಾಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ನೆಡುವತೂರಿನಲ್ಲಿ ನಡೆದಿದೆ.
ಮೃತರನ್ನು ಅಗ್ನಿಶಾಮಕ ಅಧಿಕಾರಿ ಸೋನು ಎಸ್. ಕುಮಾರ್ (36), ನೆಡುವತ್ತೂರು ಮೂಲದ ಅರ್ಚನಾ (33) ಮತ್ತು ಅರ್ಚನಾ ಅವರ ಬಾಯ್‌ಫ್ರೆಂಡ್ ತ್ರಿಶೂರ್‌ನ ಕೊಡುಂಗಲ್ಲೂರು ನಿವಾಸಿ ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಮಹಿಳೆಯೊಬ್ಬರು ಬಾವಿಗೆ ಹಾರಿದ್ದಾಗಿ ತುರ್ತು ಕರೆ ಬಂದಾಗ ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾಗ ದುರಂತ ಸಂಭವಿಸಿದೆ.
ವರದಿಗಳ ಪ್ರಕಾರ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅರ್ಚನಾ ಕಳೆದ ಎರಡು ತಿಂಗಳಿನಿಂದ ಶಿವಕೃಷ್ಣನ್ ಜೊತೆ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಶಿವಕೃಷ್ಣನ್ ಕುಡಿದು ಮನೆಗೆ ಮರಳಿದ್ದು, ಗಲಾಟೆ ಪ್ರಾರಂಭಿಸಿದ್ದರು. ಗಲಾಟೆ ಇನೂ ಹೆಚ್ಚು ಆಗಬಾರದೆಂಬ ಪ್ರಯತ್ನದಲ್ಲಿ ಅರ್ಚನಾ ಉಳಿದ ಮದ್ಯವನ್ನು ಮನೆಯಲ್ಲಿ ಬಚ್ಚಿಟ್ಟಿದ್ದರು. ಆದರೆ ಇದರಿಂದ ಕೋಪಗೊಂಡ ಶಿವಕೃಷ್ಣನ್ ಅರ್ಚನಾ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳದಿಂದ ಬೇಸತ್ತ ಅರ್ಚನಾ ತನ್ನ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿದ್ದಾರೆ.
ಈ ಬಗ್ಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿದೆ. ಅಗ್ನಿಶಾಮಕ ಅಧಿಕಾರಿ ಕುಮಾರ್ ಅವರು ಮಹಿಳೆಯ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾಗ ಬಾವಿಯ ಸುತ್ತಲಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದಿದೆ. ಈ ವೇಳೆ ಕುಮಾರ್ ಹಾಗೂ ಬಾವಿಗೆ ಒರಗಿದ್ದ ಶಿವಕೃಷ್ಣನ್ ಕೂಡಾ ಬಾವಿಯ ಆಳಕ್ಕೆ ಬಿದ್ದಿದ್ದಾರೆ.
ಆಗ ಅಲ್ಲಿದ್ದ ಉಳಿದ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸ್ಥಳೀಯರು ಹೇಗೋ ಹರಸಾಹಸ ಪಟ್ಟು ಮೂವರನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾದಲೇ ಮೂವರ ಸ್ಥಿತಿಯೂ ಚಿಂತಾಜನಕವಾಗಿತ್ತು. ತಕ್ಷಣ ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯುತು. ಆದರೆ ಅಲ್ಲಿ ವೈದ್ಯರು ಮೂವರು ಕೂಡಾ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.


