ಜೋಡಿ ಬದಲಿಸಿ ಕೈ ಸುಟ್ಟುಕೊಂಡ ಜೊಲ್ಲೆ ; ತಪ್ಪಿದ ಅಧ್ಯಕ್ಷ ಹುದ್ದೆ..!
ಬೆಳಗಾವಿ : ಇದೇ ವರ್ಷದ ನಡೆದ ಲೋಕಸಭಾ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಕೈಯಲ್ಲಿ ಸೋತು ಸುಣ್ಣವಾಗಿದ್ದ ಅಣ್ಣಾಸಾಹೇಬ್ ಜೊಲ್ಲೆ ಸಧ್ಯ ಮತ್ತೊಮ್ಮೆ ಕೈ ಸುಟ್ಟುಕೊಂಡಿದ್ದಾರೆ.
ಈ ಹಿಂದಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ಅವರನ್ನು ಕೆಳಗಿಳಿಸುವಲ್ಲಿ ಜೊಲ್ಲೆ ಪಾತ್ರ ಬಹಳಷ್ಟಿತ್ತು. ಆದರೆ ಅವರನ್ನು ಕೆಳಗಿಳಿಸಿ ತಾವು ಅಧ್ಯಕ್ಷ ಹುದ್ದೆ ಅಲಂಕರಿಸಬೇಕು ಎಂಬು ಆಸೆ ಕೊನೆಗೂ ಈಡೇರಿಲ್ಲ. ಇದರಿಂದ ಜೊಲ್ಲೆ ನಡೆಸಿದ ಹೋರಾಟದ ಫಲ ಏನು ಎಂಬ ಚರ್ಚೆ ಜೋರಾಗಿದೆ.
ಜಾರಕಿಹೊಳಿ ಮನೆತನದ ಎರಡನೇ ಕುಡಿಯನ್ನು ಯಶಸ್ವಿಯಾಗಿ ರಾಜಕೀಯಕ್ಕೆ ಪರಿಚಯಿಸಲು ಸಹೋದರರು ಒಟ್ಟುಗೂಡಿ ಪ್ರಯತ್ನಪಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಜೊಲ್ಲೆ ಕುಟುಂಬಕ್ಕೆ ಸೋಲಿನ ರುಚಿ ತೋರಿಸುವಲ್ಲಿ ಸಾಹುಕಾರ್ ಪಡೆ ಒಂದಾಗಿತ್ತು. ಆದರೆ ಈಗ ತಮ್ಮನ್ನೇ ಸೋಲಿಸಿದ ಜಾರಕಿಹೊಳಿ ಸಹೋದರರ ಜೊತೆ ಜೊಲ್ಲೆ ಸೇರಿದ್ದು ಜನರ ಅಚ್ಚರಿಗೆ ಕಾರಣವಾಗಿದೆ.
ಕತ್ತಿ ಕುಟುಂಬದ ವಿರುದ್ಧ ಇದ್ದ ಅಸಮಾಧಾನಕ್ಕೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಲ್ಲಿ ಜೊಲ್ಲೆ ಅವರ ಪಾತ್ರ ಇತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ. ನಿಪ್ಪಾಣಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಕಿನ ಹೊಸ ಸದಸ್ಯರ ಸೇರ್ಪಡೆ ವಿಚಾರವಾಗಿ ಸ್ಪರ್ಧೆ ಏರ್ಪಟ್ಟಿತು. ಇದಕ್ಕೆ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಒಪ್ಪದಿದ್ದ ಕಾರಣಕ್ಕೆ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದೊದಗಿತ್ತು.
ಇತ್ತ ಡಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಅಣ್ಣಾಸಾಹೇಬ್ ಜೊಲ್ಲೆಗೆ ಮತ್ತೊಂದು ನಿರಾಸೆ ಉಂಟಾಗಿದೆ. ತಮ್ಮ ಒಡೆತನದ ಖಾಸಗಿ ಬ್ಯಾಂಕಿನಿಂದ ಡಿಸಿಸಿ ಬ್ಯಾಂಕಿಗೆ ಕೋಟ್ಯಾಂತರ ರು. ಠೇವಣಿ ಮಾಡಿದ್ದಾಗಿ ಸ್ವತಃ ಜೊಲ್ಲೆ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಜೊಲ್ಲೆಗೆ ಅಧ್ಯಕ್ಷ ಪಟ್ಟ ಕಟ್ಟಲು ಸಚಿವ ಸತೀಶ್ ಜಾರಕಿಹೊಳಿ ಸುತಾರಾಂ ಒಪ್ಪಿಗೆ ಸೂಚಿಸಿಲ್ಲ.
ಮೊದಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜೊಲ್ಲೆ, ನಿಧಾನಕ್ಕೆ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದಾರೆ. ಮುಂದೆಯೂ ಜೊಲ್ಲೆ ಅವರ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಯಲ್ಲಿ ಸಿಲುಕಿದರೆ ಯಾವ ಬಣದ ಜೊತೆ ಗುರುತಿಸಿಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.


