
ವೀರಶೈವ-ಲಿಂಗಾಯತರು ವಿಶ್ವವ್ಯಾಪಿಗಳು ; ಕುರುಕ್ಷೇತ್ರದಲ್ಲಿ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಪಂಜಾಬಿ ಕೃತಿ ಲೋಕಾರ್ಪಣೆಯಲ್ಲಿ ಕಾಶಿ ಜಗದ್ಗುರುಗಳ ನುಡಿ

ಹುಬ್ಬಳ್ಳಿ : ವೀರಶೈವ-ಲಿಂಗಾಯತರು ಒಂದು ಪ್ರದೇಶಕ್ಕೆ ಒಂದು ಭಾಷೆಗೆ ಸೀಮಿತವಾಗಿರದೇ ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ವಿಶ್ವದ ಅನೇಕ ರಾಷ್ಟçಗಳಲ್ಲಿ ವಾಸವಾಗಿರುವುದರಿಂದ ವೀರಶೈವ-ಲಿಂಗಾಯತರು ವಿಶ್ವವ್ಯಾಪಿಗಳು ಎಂದು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಹರಿಯಾಣಾ ರಾಜ್ಯದ ಕುರುಕ್ಷೇತ್ರದಲ್ಲಿ ನಡೆದ ಶ್ರೀಸಿದ್ಧಾಂತ ಶಿಖಾಮಣಿಯ ಪಂಜಾಬಿ ಅನುವಾದಿತ ಕೃತಿಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ವೀರಶೈವ-ಲಿಂಗಾಯತರ ಭಾಷೆ ಕೇವಲ ಕನ್ನಡವಲ್ಲ. ಇಷ್ಟಲಿಂಗ ಪೂಜಕರು ಒಂದು ಭಾಷೆ ಒಂದು ಪ್ರಾಂತಕ್ಕೆ ಸೀಮಿತರಾಗಿಲ್ಲ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ದಿಲ್ಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು ಕಾಶ್ಮೀರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಓಡಿಸಾ ರಾಜ್ಯಗಳಲ್ಲಿಯೂ ವೀರಶೈವ ಲಿಂಗಾಯತರಿದ್ದಾರೆ. ಕೇವಲ ಒಂದು ಭಾಷೆ-ವೇಷದಿಂದ ಗುರುತಿಸದೇ ಭಸ್ಮ, ಇಷ್ಟಲಿಂಗ, ರುದ್ರಾಕ್ಷಿ ಧಾರಣೆ ಮತ್ತು ಪಂಚಾಕ್ಷರಿ ಮಹಾಮಂತ್ರದ ಅನುಸಂಧಾನಕ್ಕೆ ತೆರೆದುಕೊಂಡವರೆಲ್ಲರೂ ವೀರಶೈವ ಲಿಂಗಾಯತರು ಎಂದರು.
ವೀರಶೈವ-ಲಿಂಗಾಯತರ ದಾರ್ಶನಿಕ ಗ್ರಂಥವಾದ ಶ್ರೀಸಿದ್ಧಾಂತ ಶಿಖಾಮಣಿಯನ್ನು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳ ಜೊತೆಗೆ ವಿದೇಶಿ ಭಾಷೆಗಳ ಅನುವಾದದ ಮಹತ್ಕಾರ್ಯವನ್ನು ಕಾಶಿ ಜ್ಞಾನ ಪೀಠವು ಬಹಳ ಬದ್ಧತೆಯಿಂದ ಮಾಡುತ್ತಿದೆ.
ಪ್ರಸ್ತುತ ಪಂಜಾಬಿ ಲೇಖಕಿ ಡಾ. ಶಾಲೂ ರಾಮನಿವಾಸ ಜಂಗಮ ಅವರು ಅನುವಾದಿಸಿದ ಪಂಜಾಬಿ ಭಾಷಾ ಕೃತಿಯ ಮೂಲಕ ಪಂಜಾಬ ರಾಜ್ಯದ ವೀರಶೈವ ಲಿಂಗಾಯತರಿಗೆ ಶಿವಾದ್ವೈತ ಸಿದ್ಧಾಂತದ ಪರಿಚಯವಾಗಲಿದೆ ಎಂದೂ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಲೋಕಾರ್ಪಣೆ : ಹರಿಯಾಣ ರಾಜ್ಯದ ಗ್ರಾಮೀಣ ವಿಕಾಸ ಸಚಿವ ಕೃಷ್ಣಲಾಲ್ ಪವಾರ ಕೃತಿ ಲೋಕಾರ್ಪಣೆ ಮಾಡಿ, ಸನಾತನ ವೀರಶೈವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶಿವಕಥಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರಸ್ತುತ ಪಂಜಾಬಿ ಭಾಷೆಯ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥ ಹೊರಬಂದಿರುವುದು ಧರ್ಮದ ಬೇರುಗಳು ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಾರ್ಶಿ ದಹಿವಾಡಕರ ಮಠದ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯರು, ಹುಬ್ಬಳ್ಳಿ ನವನಗರದ ಕಾಶಿ ಖಾಸಾಶಾಖಾ ಮಠದ ಶ್ರೀರಾಜಶೇಖರ ಶಿವಾಚಾರ್ಯರು, ಗ್ರಂಥದ ಅನುವಾದಕಿ ಡಾ. ಶಾಲು ಜಂಗಮ, ರಾಮನಿವಾಸ ಜಂಗಮ, ರಾಜಸ್ಥಾನದ ರಾಮಕುಮಾರ್ ಜಂಗಮ, ರಮೇಶ ಜಂಗಮ, ದೀನ ದಯಾಲ ಜಂಗಮ.
ಗದಗ ನಗರದ ಜಿ. ಕೆ. ಗುರುಮಠ, ಗುರುಸಿದ್ದಯ್ಯ ಹಿರೇಮಠ, ಪಂಡರಪುರದ ಸುಭಾಸ ಮಹಮಾನೆ, ಸಾಂಗ್ಲಿಯ ಶ್ರೀಧರ್ ಪೈಲ್ವಾನ್, ಮುಂಬೈಯ ಶಂಕರಸ್ವಾಮಿ, ಪುಣೆಯ ಭರತ ಉಂಬರಕರ, ಲಾತೂರಿನ ಡಾ.ರೇವಣಸಿದ್ದ ಶಾಬಾದೆ ಅವರನ್ನು ಕಾಶಿ ಜಗದ್ಗುರುಗಳು ಗೌರವಿಸಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಲೇಖಕ ಡಾ. ರಾಮನಿವಾಸ ಜಂಗಮ ಅವರು ಶ್ರೀಸಿದ್ಧಾಂತ ಶಿಖಾಮಣಿಯನ್ನು ಹರಿಯಾಣಿ ಭಾಷೆಗೆ ಅನುವಾದ ಮಾಡುವ ಸಂಕಲ್ಪ ಮಾಡಿದರು.