Select Page

Advertisement

ಪಕ್ಷಾಂತರಿಗಳನ್ನು ಬಿಟ್ಟು ಕಾರ್ಯಕರ್ತರ ಪಾದ ಹಿಡಿಯಬೇಕು ಬಿಜೆಪಿ ನಾಯಕರು ; ಕಮಲಕ್ಕೆ ಇದು ಸಂಕ್ರಮಣ..!

ಪಕ್ಷಾಂತರಿಗಳನ್ನು ಬಿಟ್ಟು ಕಾರ್ಯಕರ್ತರ ಪಾದ ಹಿಡಿಯಬೇಕು ಬಿಜೆಪಿ ನಾಯಕರು ; ಕಮಲಕ್ಕೆ ಇದು ಸಂಕ್ರಮಣ..!

ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿ ಅಧಿಕಾರ ಅನುಭವಿಸಿದ್ದ ವಲಸಿಗರು ಸಧ್ಯ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರದ ಆಸೆಯಲ್ಲಿರುವ ವಲಸಿಗರಿಗೆ ಬಿಜೆಪಿ ತತ್ವ ಸಿದ್ದಾಂತ ತಲೆಗೆ ಸೇರುವುದಿಲ್ಲ. ಕೂಡಲೇ ಪಕ್ಷಾಂತರಿಗಳನ್ನ ಬಿಟ್ಟು ನಿಷ್ಠಾವಂತ ಕಾರ್ಯಕರ್ತರ ಪಾದ ಹಿಡಿಯಬೇಕು ಎಂಬ ಅಭಿಪ್ರಾಯ ಸಧ್ಯ ಕಮಲ ಪಡೆಯ ಕಾರ್ಯಕರ್ತರಲ್ಲಿ ಮೂಡಿಬರುತ್ತಿದೆ.

ಹೌದು ಕಳೆದ ನಾಲ್ಕು ವರ್ಷದ ಹಿಂದೆ ಹಿಂಡಾಗಿ ಬಿಜೆಪಿ ಬಾಗಿಲು ತಟ್ಟಿದ್ದ ಪಕ್ಷಾಂತರ ನಾಯಕರು ನಂತರ ಅಧಿಕಾರವನ್ನು ಅನುಭವಿಸಿದ್ದರು. ಅದಾದ ನಂತರದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ ನಂತರ ಸಧ್ಯ ಪಕ್ಷಾಂತರವಾಗಿ ಬಂದಿದ್ದ ಕೆಲ ಶಾಸಕರು ಮತ್ತೆ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಈಗಾಗಲೇ ಶಾಸಕ ಹಾಗೂ ಮಾಜಿ ಮಂತ್ರಿ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಒಂದು ಕಾಲು ಬಿಜೆಪಿಯಿಂದ ಹೊರಗಿಟ್ಟಿದ್ದು, ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆ ಕೂಡಾ ಮಾಡಿದ್ದಾರೆ. ಸಧ್ಯ ಕೆಲಸ ವಲಸಿಗರ ನಡೆಯಿಂದ ಬಿಜೆಪಿಯ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದ್ದು ವಲಸಿಗರನ್ನು ನಂಬದಂತೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾರ್ಯಕರ್ತರ ಪಾದ ಹಿಡಿಯುತ್ತಾ ಬಿಜೆಪಿ ಹೈಕಮಾಂಡ್ : ಹೇಳಿಕೇಳಿ ಬಿಜೆಪಿ ಪ್ರಬಲ ಕಾರ್ಯಕರ್ತರ ಪಡೆ ಹೊಂದಿರುವ ಪಕ್ಷ. ಇಲ್ಲಿ ನಾಯಕರಿಗಿಂತ ಕಾರ್ಯಕರ್ತರೇ ನಿಜವಾದ ಶಕ್ತಿ. ಶಾಸಕರೇ ಇಲ್ಲದ ಎಂಬತ್ತರ ದಶಕದಲ್ಲಿ ಕೇವಲ ಕಾರ್ಯಕರ್ತರ ಬಲದಿಂದ ಪಕ್ಷ ಸಂಘಟಿಸುತ್ತಾ ಎರಡು ಬಾರಿ ಅಧಿಕಾರ ನಡೆಸುವ ಮಟ್ಟಿಗೆ ಬೆಳೆದುದ್ದು ಇತಿಹಾಸ. ಕಳೆದ 2019 ರಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯ ಅರ್ಧದಷ್ಟು ಅಧಿಕಾರವನ್ನು ವಲಸಿಗರೇ ಅನುಭವಿಸುದ್ದರು.

ರಾಜ್ಯಾಧ್ಯಕ್ಷರ ಬದಲಾವಣೆ ಒತ್ತಡ : ಕೇವಲ ಪಕ್ಷಾಂತರಿಗಳ ವಿರುದ್ಧ ಕಾರ್ಯಕರ್ತರ ಆಕ್ರೋಶ ಇಲ್ಲ.‌ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಬಲವಾದ ಕೂಗು ಎದ್ದಿದೆ. ಹೀನಾಯ ಸೋಲಿನ‌ ಬಳಿಕ‌ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಹೈಕಮಾಂಡ್ ಯಾವ ಬರವಸೆಯನ್ನೂ ಹೊಂದಿಲ್ಲ. ಹೀಗಾಗಿ ಉತ್ತಮ ಸಂಘಟನಾ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬುದು ಕಾರ್ಯಕರ್ತರ ವಾದ.

ಸಂಘಟನೆ ಇಲ್ಲದೆ ಸೊರಗಿದ ಬಿಜೆಪಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆಯುತ್ತಾ ಬಂದಿದೆ. ಹಾಗೆಯೇ ಗ್ಯಾರಂಟಿ ಗೊಂದಲದಲ್ಲಿ  ಅಭಿವೃದ್ಧಿ ಕಾರ್ಯಗಳಿಗೆ ತಡೆ ಕೊಡಲಾಗಿದೆ. ಹಾಗೆಯೇ ಕೆಲ ಇಲಾಖೆ ಅಧಿಕಾರಿಗಳ ತಿಂಗಳ ಸಂಬಳ ಕೂಡಾ ಆಗಿಲ್ಲ. ಈ ಎಲ್ಲಾ ಕಾರಣಗಳ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ ಎಂಬುದು ವಿಪರ್ಯಾಸವೆ ಸರಿ.

Advertisement

Leave a reply

Your email address will not be published. Required fields are marked *

error: Content is protected !!