ಅನ್ಯಜಾತಿ ಯುವಕನ ಜೊತೆ ಪ್ರೀತಿ ; ಸ್ವಂತ ಮಗಳನ್ನೇ ಕೊಂದು ಸುಟ್ಟುಹಾಕಿದ ತಂದೆ
ಕಲಬುರಗಿ : ಅನ್ಯಜಾತಿ ಯುವಕನನ್ನು ಪ್ರೀತಿ ಮಾಡಿದಳು ಎಂಬ ಕಾರಣಕ್ಕೆ ತನ್ನ ಮಗಳನ್ನು ಕೊಂದು ಮೃತದೇಹ ಸುಟ್ಟು ಹಾಕಿರುವ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.
ಕವಿತಾ ಕೊಳ್ಳೂರ (18) ಮೃತಪಟ್ಟ ಯುವತಿಯಾಗಿದ್ದು, ಯುವತಿಯ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು, ದತ್ತು ಚೋಳಾಭರ್ಧಿ ವಿರುದ್ಧ ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಲಿಂಗಾಯತ ಸಮಾಜದ ಕವಿತಾ, ಅದೇ ಗ್ರಾಮದ ಕುರುಬ ಸಮಾಜದ ಮಾಳಪ್ಪ ಪೂಜಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಇವರಿಬ್ಬರ ನಡುವೆ ಪರಿಚಯ ಬೆಳೆದಿತ್ತು.
ಪ್ರೀತಿ ವಿಚಾರ ಮನೆಯವರಿಗೆ ತಿಳಿದಾಗ, ಕಾಲೇಜು ಬಿಡಿಸಿ ಮನೆಗೆ ಕರೆಸಿದ್ದರು. ಆದರೆ ಕವಿತಾ ಮದುವೆ ಮಾಡಲು ಪಟ್ಟು ಹಿಡಿದಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ ಮನೆಯವರು ಸೇರಿ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಕೀಟನಾಶಕ ಸುರಿದು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಯತ್ನಿಸಿದ್ದು, ಬೆಳಗ್ಗೆ ಗ್ರಾಮ ಹೊರವಲಯದ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟಿದ್ದಾರೆಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಪಿಐ ಮಂಜುನಾಥ ಇಕ್ಕಳಕಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


