S.JAISHANKAR: ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಬಿಟ್ಟ ಇರಾನ್ – ಈ ಬಗ್ಗೆ ಎಸ್. ಜೈಶಂಕರ್
ದೆಹಲಿ: ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಎರಡು ಭಾರತೀಯ ಧ್ವಜ ಹೊತ್ತ ಟ್ಯಾಂಕರ್ಗಳು ಇರಾನ್ನ (Iran) ಹಾರ್ಮುಜ್ ಜಲಸಂಧಿಯ(Strait of Hormuz) ಮೂಲಕ ಸುರಕ್ಷಿತವಾಗಿ ಹಾದು ಹೋಗಿವೆ. ಈ ಬಗ್ಗೆ ಎಸ್. ಜೈಶಂಕರ್ (S.Jaishankar) ಅವರು ವಿವರಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯದ ಮಾತುಕತೆಯ ನಂತರ ಇರಾನ್ ಭಾರತೀಯ ಹಡಗುಗಳಿಗೆ ಹಾರ್ಮುಜ್ ಮೂಲಕ ಸುರಕ್ಷಿತವಾಗಿ ಸಾಗಲು ಅವಕಾಶ ನೀಡಿತು. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ವೇಳೆ ಹಲವಾರು ಹಡಗುಗಳಿಗೆ ಭದ್ರತಾ ಸಮಸ್ಯೆ ಉಂಟಾಗಿತ್ತು. ಆದರೆ ಭಾರತದ ಧ್ವಜ ಹೊಂದಿದ ಎರಡು ಟ್ಯಾಂಕರ್ ಹಡಗುಗಳಿಗೆ ಇರಾನ್ ಸುರಕ್ಷಿತವಾಗಿ ಹಾರ್ಮುಜ್ ಮೂಲಕ ಸಾಗಲು ಅನುಮತಿ ನೀಡಿತು.
ಈ ಹಡಗುಗಳು ಭಾರತಕ್ಕೆ ಅಗತ್ಯವಾದ ತೈಲ ಸಾಗಣೆ ಮಾಡುತ್ತಿದ್ದವು. ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಇರಾನ್ ಜೊತೆ ಯಾವುದೇ ” ಒಪ್ಪಂದ” ಇಲ್ಲ ಮತ್ತು “ಪ್ರತಿಯೊಂದು ಹಡಗು ಚಲನೆಯು ವೈಯಕ್ತಿಕವಾಗಿದೆ” ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದರು.
ಹಡಗನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ನೀಡಿದರ ಪ್ರತಿಯಾಗಿ ಇರಾನ್ ಏನನ್ನೂ ಪಡೆದಿಲ್ಲ ಮತ್ತು ದೆಹಲಿ ಮತ್ತು ಟೆಹ್ರಾನ್ ನಡುವೆ ಮೊದಲಿನಿಂದಲೂ ವ್ಯಾಪಾರ ನಡೆಯುತ್ತಿತು ಅದರ ಆಧಾರದ ಮೇಲೆ ಈ ಹಡಗು ಬಂದಿದೆ ಎಂದಿದ್ದಾರೆ.
ನಮ್ಮಲ್ಲಿ ಇನ್ನೂ ಅನೇಕ ಹಡಗುಗಳಿವೆ. ಆದ್ದರಿಂದ ಇದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದರೂ, ಅದರ ಬಗ್ಗೆ ನಿರಂತರ ಕೆಲಸ ನಡೆಯುತ್ತಿರುವುದರಿಂದ ಸಂಭಾಷಣೆ ಮುಂದುವರೆದಿದೆ” ಎಂದು ಡಾ. ಜೈಶಂಕರ್ ಹೇಳಿದರು.
ಭಾರತೀಯ ಧ್ವಜ ಹೊತ್ತ ಶಿವಾಲಿಕ್ ಮತ್ತು ನಂದಾ ದೇವಿ ಟ್ಯಾಂಕರ್ಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಸಾಗಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳಿಗೆ ಆಗಮಿಸುವ ನಿರೀಕ್ಷೆಯಿದೆ.
ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಶೇಕಡಾ 20 ರಷ್ಟು ಸಾಗಣೆ ಮಾರ್ಗವಾಗಿರುವ ಈ ಜಲಸಂಧಿಯನ್ನು ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ನಿರ್ಬಂಧಿಸಿದೆ. ಇದು ಭಾರತ ಮತ್ತು ಚೀನಾದಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಇಂಧನದ ಕೊರತೆಗೆ ಕಾರಣವಾಗಿದೆ.
ಭಾರತವು ದ್ರವೀಕೃತ ನೈಸರ್ಗಿಕ ಅನಿಲದ ವಿಶ್ವದ ನಾಲ್ಕನೇ ಅತಿದೊಡ್ಡ ಖರೀದಿದಾರ ಮತ್ತು ಅಡುಗೆಗೆ ಬಳಸುವ LPG ಯ ಎರಡನೇ ಅತಿದೊಡ್ಡ ಖರೀದಿದಾರ. ಈ ಅನಿಲವನ್ನು ಪ್ರಧಾನವಾಗಿ ಮಧ್ಯಪ್ರಾಚ್ಯದಿಂದ ಪಡೆಯಲಾಗುತ್ತದೆ. ಪೂರೈಕೆ ಸಮಸ್ಯೆಗಳ ನಡುವೆಯೂ, ಮನೆಗಳು ಮತ್ತು ಸಾರಿಗೆ ವಲಯಗಳಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.


