ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆ
ಧಾರವಾಡ : ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ಕೆಲಗೇರಿ ರಸ್ತೆಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿತು.
ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತಾಗಿ ಲೋಕ ಕಲ್ಯಾಣವಾಗಲಿ ಎಂದು ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಹಿಳೆಯರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಮಾಜದಲ್ಲಿ ಮಹಿಳೆಯರು ಅನುಭವಿಸುತ್ತಿರುವ ನೋವು- ಸಂಕಷ್ಟಗಳು ನಿವಾರಣೆಯಾಗಿ ಸಕಲ ಇಷ್ಟಾರ್ಥಗಳನ್ನು ಕರುಣಿಸಲಿ ಎಂಬ ಹರಕೆಯನ್ನು ಹೊತ್ತ ಮಹಿಳೆಯರು ದೇವಿಯಲ್ಲಿ ಸಂಕಲ್ಪ ಮಾಡಿಕೊಂಡು ಕುಂಕುಮಾರ್ಚನೆ ಮಾಡಿದರು.
ಶಾಂತಿ ನಿಕೇತನ ನಗರ ಮತ್ತು ಸುತ್ತುಮುತ್ತಲಿನ ಬಡಾವಣೆಗಳ ನೂರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕರಾದ ಶ್ರೀ ಅರುಣ ಹನುಮಂತರಾವ್ ಕುಲಕರ್ಣಿ ಅವರು ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು.


