Select Page

Advertisement

“ಅಹಿಂಸಾ ಪರಮೋ ಧರ್ಮ” ಎಂದ ಸನ್ಯಾಸಿಯನ್ನು 9 ತುಂಡು ಮಾಡಿದ್ದು ಯಾವ ನ್ಯಾಯ – ವಿನಾಯಕ ಮಠಪತಿ

“ಅಹಿಂಸಾ ಪರಮೋ ಧರ್ಮ” ಎಂದ ಸನ್ಯಾಸಿಯನ್ನು 9 ತುಂಡು ಮಾಡಿದ್ದು ಯಾವ ನ್ಯಾಯ – ವಿನಾಯಕ ಮಠಪತಿ

ಚಿಕ್ಕೋಡಿ : ಅಹಿಂಸೆಯೇ ನಮ್ಮ‌ ಪರಮ ಧರ್ಮ ಎಂದು ಸಾರುವ ಜೈನ ಸಂಪ್ರದಾಯದ ಮೂಲ ಆಶಯವೇ ಇದು. ಈ ಭೂಮಂಡಲದ ಯಾವೊಂದು ಜೀವಿಯನ್ನು ನೋಯಿಸದೇ ಬದುಕು ಸಾಗಿಸಬೇಕು ಎಂಬ ಅದ್ಬುತ ಸಾರ ಸಾರಿರುವ ಈ ನೆಲದ ಸಂಸ್ಕೃತಿಯ ಸನ್ಯಾಸಿಯನ್ನು ಒಂಬತ್ತು ತುಂಡು ಮಾಡಿ ಸಾಯಿಸಿದ್ದು ಯಾವ ನ್ಯಾಯ..?

ಹೌದು ವ್ಯವಹಾರ ಎಂಬುದು ಯಾರು ಮಾಡಲ್ಲ ಹೇಳಿ. ಬದಲಾದ ಕಾಲಗಟ್ಟ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಮನುಷ್ಯ ತನ್ನ ಬದುಕಿನ ದಿಕ್ಕನ್ನು ಬದಲಾಯಿಸಿಕೊಳ್ಳುತ್ತ ಸಾಗುತ್ತಾನೆ. ಸನ್ಯಾಸಿ ಆಗಿರಲಿ ಸಂಸಾರಿಕ ಆಗಿರಲಿ ಮನುಷ್ಯನ ಬದಲಾವಣೆ ಎಂಬುದು ಜಗದ ನಿಯಮ. ಹಾಗಂತ ವ್ಯವಹಾರ ತಪ್ಪಿದ ಕಾರಣಕ್ಕೆ ಸನ್ಯಾಸಿ ಎಂದು ಅರಿಯದೇ ಮೃಗದಂತೆ ವರ್ತನೆ ಮಾಡುವುದು ಎಷ್ಟು ಸರಿ.

ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿ ಪರ್ವತ ಜೈನ ಆಶ್ರಮದ, ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಒಂಬತ್ತು ತುಂಡುಗಳಾಗಿ ಅವರ ದೇಹವನ್ನು ಕತ್ತರಿಸಿ ಅತೀ ಕ್ರೂರವಾಗಿ ಕೊಂದು ಎಸೆಯಲಾಗಿದೆ. 60 ರ ಸಮೀಪದ ಇಳಿ ವಯಸ್ಸಿನ ಆ ಜೀವವನ್ನು ಈ ರೀತಿ ಕೊಂದು ಎಸೆಯುವಾಗ ಎಷ್ಟು ಸಂಕಟ ಅನುಭವಿಸರಬಾರದು.?

ಮೊದಲ ಆರೋಪಿಯ ಹೆಸರು ನಾರಾಯಣ ಮಾಳಿ. ಈತ 
ಕಾಮಕುಮಾರ ನಂದಿ ಮಹಾರಾಜರ ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಶ್ರೀಗಳ ಜೊತೆಗೆ ಉತ್ತಮ‌ ಸಂಬಂಧ ಹೊಂದಿದ್ದ. ಬರು ಬರುತ್ತಾ ಶ್ರೀಗಳ ಬಳಿ ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಂಡಿದ್ದಾನೆ. ಎಷ್ಟಾದರು ಮಗು ಮನಸ್ಸಿನ ಸ್ವಾಮೀಜಿ ಇವನ ವೈಯಕ್ತಿಕ ಸಮಸ್ಯೆ ಕಂಡು ತಮ್ಮ ಟ್ರಸ್ಟಿನಲ್ಲಿದ ಒಂದಿಷ್ಟು ಲಕ್ಷ ಹಣ ಸಹಾಯವಾಗಿ ಕೊಟ್ಟಿದ್ದಾರೆ.

ಶ್ರೀಗಳ ಬಳಿ ಸಹಾಯ ಪಡೆದ ಈ ಆಸಾಮಿ ಮರಳಿ ಕೊಡಬೇಕಾಗುತ್ತದೆ ಎಂದು ಸನ್ಯಾಸಿಯನ್ನೇ ಮುಗಿಸಿದ್ದಾನೆ. ಸ್ವಾಮೀಜಿ ಮಲಗಿದ್ದ ಕೋಣೆಗೆ ನುಗ್ಗಿ ಅವರಿಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದಾನೆ. ನಂತರ ಇನ್ನೊಬ್ಬ ಐನಾತಿ ಹಸನ್ ಡಲಾಯತ್ ಎಂಬಾತನ ಜೊತೆ ಸೇರಿ 9 ತುಂಡು ಮಾಡಿ ಬೋರ್ ವೆಲ್ ನಲ್ಲಿ ಹಾಕಿದ್ದಾನೆ.‌ ಇಂತಹ ಕ್ರೂರ ಮನಸ್ಥಿತಿಗೆ ಏನೆಂದು ಹೇಳಬೇಕು.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಸನ್ಯಾಸಿಗಳಿಗೆ ಉನ್ನತ ಸ್ಥಾನ ಕೊಡಲಾಗಿದೆ. ಆದರೆ ಕೆಲ ನರಹಂತಕರು ಮಾಡುವ ಕೆಲಸದಿಂದ ಇಡೀ ಸಮುದಾಯ‌‌ ತಲೆ ತಗ್ಗಿಸಬೇಕಾಗುತ್ತದೆ. ಇಂತಹ ಕೃತ್ಯಗಳು ಯಾವತ್ತೂ ನಾಗರಿಕ ಸಮಾಜದಲ್ಲಿ ನಡೆಯಬಾರದು. ಅಪರಾಧಿಗಳಿಗೆ ಕಾನೂನು ಮೂಲಕ ತಕ್ಕ ಶಾಸ್ತಿ ಆಗಬೇಕು.‌ ಗಲ್ಲು ಶಿಕ್ಷೆ ವಿಧಿಸಬೇಕು‌. ಕೊನೆಯ ಕ್ಷಣ ನೊಂದು ಪ್ರಾಣಬಿಟ್ಟ ಆ ಜೀವಿ ಆತ್ಮಕ್ಕಾದರೂ ಶಾಂತಿ ಸಿಗಲಿ.

🖋 ವಿನಾಯಕ ಮಠಪತಿ
ಪತ್ರಕರ್ತ – ಹವ್ಯಾಸಿ ಬರಹಗಾರ

Advertisement

Leave a reply

Your email address will not be published. Required fields are marked *

error: Content is protected !!