ಇದು ನಕಲಿ ಗಾಂಧಿಗಳ ಸಮಾವೇಶ : ಜಗದೀಶ್ ಶೆಟ್ಟರ್ ವ್ಯಂಗ್ಯ
ಬೆಳಗಾವಿ : ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರಕಾರ ತಮ್ಮ ಪಕ್ಷದ ಸಮಾವೇಶ ಮಾಡುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಹಾಗೂ ಈಗಿನ ಕಾಂಗ್ರೆಸ್ಸಿಗೆ ತುಂಬಾ ವ್ಯತ್ಯಾಸ ಇದ್ದು, ಇದು ನಕಲಿ ಗಾಂಧಿಗಳ ಸಮಾವೇಶ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಮಹಾತ್ಮ ಗಾಂಧಿಜಿಯವರು ಇಡೀ ಭಾರತಕ್ಕೆ ಬೇಕಾದ ಮಹಾನ್ ವ್ಯಕ್ತಿ. ಅವರು ಭಾಗವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯಬೇಕಿತ್ತು. ಆದರೆ ಕಾಂಗ್ರೆಸ್ ಸರಕಾರ ತಮ್ಮ ಪಕ್ಷದ ಸಾಧನೆ ಬಿಂಬಿಸಿಕೊಳ್ಳಲು ಬಳಸಿಕೊಂಡಿದ್ದೆ. ಅಲ್ಲಲ್ಲಿ ಮಾತ್ರ ಮಹಾತ್ಮ ಗಾಂಧಿ ಭಾವಚಿತ್ರ ಬಿಟ್ಟರೆ ಇನ್ನುಳಿದ ಕಡೆ ಕಾಂಗ್ರೆಸ್ ನಾಯಕರ ಪೋಟೋಗಳೇ ಇದ್ದು ಇದು ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡಹೊರಟಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರಕಾರ ಮಹಾತ್ಮ ಗಾಂಧಿಜಿ ಭಾವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಿಲ್ಲ. ಆದರೆ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲಾಡಳಿತ ದೂರವಿಟ್ಟು ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಳ್ಳುತ್ತಿದೆ. ಸಾರ್ವಜನಿಕರ ಕೋಟ್ಯಾಂತರ ರು. ತೆರಿಗೆ ಹಣವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದರು.
ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾತನಾಡಿ. ಕಳೆದ ಅಧಿವೇಶನ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನವನ್ನು ಅದ್ಧೂರಿಯಾಗಿ ಆಚರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 250 ಕೋಟಿ ರು. ಗೆ ಮನವಿ ಮಾಡುವಂತೆ ಹೇಳಿದ್ದೆ. ರಾಜ್ಯ ಸರ್ಕಾರದಿಂದ ಸೇರಿಸಿ 500 ಕೋಟಿ ವೆಚ್ಚದಲ್ಲಿ ಗಾಂಧಿಜಿಯವರ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದರ ನೆನಪು ಇರಲಿಲ್ಲ. ಆದರೆ ಈಗ ಸ್ಥಳೀಯ ಶಾಸಕರು, ಸಂಸದರನ್ನು ಬದಿಗಿಟ್ಟು ಪಕ್ಷದ ಕಾರ್ಯಕ್ರಮ ಮಾಡಹೊರಟಿಗೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಿಜೆಪಿ ಬಹಿಷ್ಕಾರ
ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಸ್ಥಳೀಯ ಶಾಸಕರಿಗೆ ಹಾಗೂ ಸಂಸದರಿಗೆ ಆಹ್ವಾನ ನೀಡಿಲ್ಲ. ಗೌರವಯುತವಾಗಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರಕಾರ ನಡೆದುಕೊಂಡಿಲ್ಲ. ಈ ಉದ್ದೇಶದಿಂದ ಸರಕಾರದ ನಡೆ ಖಂಡಿಸಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೈರಾಗುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.


