ಮಕ್ಕಳಾಟಕ್ಕೆ ನಿಂತ ಹಿರಾ ಶುಗರ್ಸ್ ನಿರ್ದೇಶಕರು ; ಮುಂದುವರಿದ ನಾಟಕೀಯ ಬೆಳವಣಿಗೆ
ಬೆಳಗಾವಿ : ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಸಧ್ಯದ ಪರಿಸ್ಥಿತಿ ನೋಡಿ ಜನ ನಗುವಂತಾಗಿದೆ. ಬೆಳಿಗ್ಗೆ ಕತ್ತಿ ಮನೆಗೆ ಹೋದರೆ ಸಂಜೆ ಜೊಲ್ಲೆ ಮನೆಗೆ ಹೋಗುತ್ತಾರೆ. ಸಹಕಾರಿ ಕಾರ್ಖಾನೆ ಆಡಳಿತ ಸುಗಮವಾಗಿ ನಡೆಸಬೇಕಿದ್ದವರ ಅಲೆದಾಟ ನೋಡಿದರೆ ಹುಕ್ಕೇರಿಯಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ.
ಕತ್ತಿ ಮನೆತನದ ಹಿಡಿತದಲ್ಲಿದ್ದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಪರ ನಿಂತು ನಿರ್ದೇಶಕರು ಮಹತ್ವದ ನಿರ್ಧಾರ ಕೈಗೊಂಡಿದ್ದರು. ಇದಾದ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕತ್ತಿ ಹಾಗೂ ಎ.ಬಿ ಪಾಟೀಲ್ ಜೊತೆಗೂಡಿ ಕಾರ್ಖಾನೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.
ಆದರೆ ಸಧ್ಯ ಮತ್ತೆ ಕತ್ತಿ ಹಾಗೂ ಎ.ಬಿ ಪಾಟೀಲರಿಗೆ ಕೈ ಕೊಟ್ಟ ಹಿರಾ ಶುಗರ್ಸ್ ನಿರ್ದೇಶಕರ ಮಂಡಳಿ ಮತ್ತೆ ಜೊಲ್ಲೆ ಮನೆಗೆ ಹೋಗಿದೆ. ಅಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ನಾಯಕತ್ವದಲ್ಲೇ ಕಾರ್ಖಾನೆ ಮುನ್ನಡೆಸುವಂತೆ ಜೊಲ್ಲೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ರವಿವಾರ ಮಧ್ಯಾಹ್ನ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಭಿವಂಶಿ ಗ್ರಾಮದಲ್ಲಿರುವ ಜೊಲ್ಲೆ ಫಾರ್ಮ ಹೌಸನಲ್ಲಿ ಭೇಟಿ ಮಾಡಿದ ಹಿರಾಶುಗರ ನಿರ್ದೇಶಕರು ಚರ್ಚೆ ನಡೆಸಿ ಬಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆ ಅವರ ಮುಂದಾಳತ್ವದಲ್ಲಿ ಕಾರಖಾನೆ ಮುನ್ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.


