ಗಣೇಶ ಚತುರ್ಥಿಗೆ ಡಿಜೆ ಸಿಸ್ಟಮ್ ಬಳಸುವಂತಿಲ್ಲ ; ಸರ್ಕಾರದಿಂದ ಗೈಡ್ ಲೈನ್..!
ಬೆಂಗಳೂರು : ರಾಜ್ಯದಲ್ಲಿ ಗಣೇಶ ಹಬ್ಬ (Ganesh Chaturthi) ಹಾಗೂ ಈದ್ ಮಿಲಾದ್ (Id Milad) ಹಬ್ಬ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ. 27 ರಿಂದ ಸೆ. 15 ರ ವರೆಗೆ ಯಾವುದೇ ಡಿಜೆ ಸಿಸ್ಟಂಗಳನ್ನು ಬಳಸದಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ (State Govt) ಖಡಕ್ ಸೂಚನೆ ನೀಡಿದೆ.
ಇದೇ ತಿಂಗಳು 27 ರಿಂದ ಗಣೇಶ ಚತುರ್ಥಿ ಆರಂಭವಾಗಲಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ಸುಮಾರು ಒಂದು ವಾರಕ್ಕೂ ಹೆಚ್ಚು ದಿನ ಪೂಜೆ ಮಾಡಿ ಬಳಿಕ ವಿಸರ್ಜನೆ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ಸೆ. 5 ರಿಂದ ಮುಸ್ಲಿಮರ ಈದ್ ಮಿಲಾದ್ ಹಬ್ಬ ಆಚರಿಸಲಿದ್ದಾರೆ.
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಹಬ್ಬವನ್ನು ಕೆಲವೆಡೆ ಸುಮಾರು 15 ದಿನಗಳ ಕಾಲ ಆಚರಿಸಲಾಗುತ್ತದೆ. ಜೊತೆಗೆ ವಿಸರ್ಜನೆ ಮಾಡುವ ವೇಳೆ ಡಿಜೆ ಹಾಕಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗುತ್ತದೆ. ಇನ್ನು ಮುಸ್ಲಿಮರ ಈದ್ ಮಿಲಾದ್ ಆಚರಣೆ ಕೂಡ ಸೆ.5 ರಿಂದ ಸೆ.10 ರ ವರೆಗೆ ಆಚರಿಸಲಾಗುತ್ತದೆ.
ಹೀಗಾಗಿ ಎರಡು ಹಬ್ಬಗಳ ಆಚರಣೆ ನಡೆಸುವ ವೇಳೆ ಯಾವುದೇ ರೀತಿಯ ದುರ್ಘಟನೆ ನಡೆಯದಂತೆ, ಹಾಗೂ ಡಿಜೆ ಸಿಸ್ಟಂ ಉಪಯೋಗದಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ
ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ. 27 ರಿಂದ ಸೆ. 15 ರ ವರೆಗೆ ಯಾವುದೇ ಡಿಜೆ ಸಿಸ್ಟಂಗಳನ್ನು ಬಳಸದಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.
ಗಣೇಶ ಕೂರಿಸಲು ಮಾರ್ಗಸೂಚಿಗಳೇನು?
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ
ಚಪ್ಪರ, ಶಾಮಿಯಾನ, ಪೆಂಡಾಲ್ ಗೆ ವಿಶೇಷ ಅನುಮತಿ ಪಡೆಯಬೇಕು.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಅಹಿಕತರ ಘಟನೆ ನಡೆದರೆ ಅದಕ್ಕೆ ಸಂಘಟಕರೇ ಹೊಣೆ.
ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಾಗ್ರಿಗಳು, ಸಿಸಿಟಿವಿ ಸೇರಿದಂತೆ ಅಗತ್ಯ ಕ್ರಮವಹಿಸಬೇಕು.
ಗಣೇಶ ಕೂರಿಸುವ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಒಟ್ಟಾರೆ ಬೆಂಕಿ ಸಂಬಂಧಿಸಿದ ಸಾಮಾಗ್ರಿಗಳನ್ನು ಇಡಬಾರದು.
ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯ NOC ಕಡ್ಡಾಯ.
ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡೆಡ್ ಲೈನ್ ನೀಡಲಾಗಿದೆ.
ಯಾವುದೇ ಕಾರಣಕ್ಕೂ ಡಿಜೆ (DJ) ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ಇಲ್ಲ.
ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧಿಸಲಾಗಿದೆ.


