ಸರಕಾರಿ ವೈದ್ಯರಿಂದ ಖಾಸಗಿ ಆಸ್ಪತ್ರೆ ಸೇವೆಗೆ ನಿರ್ಬಂಧ ; ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು : ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಸರ್ಕಾರ ನಿಷೇಧಿಸಿದೆ.
ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಅಂತಹ ಸರ್ಕಾರಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಆದೇಶದಲ್ಲಿ ಹೇಳಲಾಗಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟಿಸ್ ಬಗ್ಗೆ ಕೇಳಲಾದ ಪ್ರಶ್ನೆ ಸಂದರ್ಭದಲ್ಲಿ ಈ ಬಗ್ಗೆ ಸ್ವಯಂ ಹೇಳಿಕೆ ನೀಡಿದ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್, ಸರ್ಕಾರಿ ವೈದ್ಯರ ಖಾಸಗಿ ಸೇವೆಗಳನ್ನು ನಿಯಂತ್ರಿಸಲು ಸರ್ಕಾರ ಈಗ ಹೊಸ
ನಿಯಮವನ್ನು ಜಾರಿ ಮಾಡಿದ್ದು, ಅದರಂತೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಮಾತ್ರ ನೀಡಬಹುದು. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಸೇವೆ ನೀಡುವಂತಿಲ್ಲ ಎಂದು ಹೇಳಿದರು
ಈ ಬಗ್ಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಈಗಿರುವ ಸರ್ಕಾರಿ ಆದೇಶಗಳ ಪ್ರಕಾರ ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿ ನಂತರ ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಖಾಸಗಿಯಾಗಿಯೂ ಸೇವೆ ನೀಡಲು ಅನುಮತಿ ಇದೆ.
ಆದರೆ, ಇನ್ನು ಮುಂದೆ ಸರ್ಕಾರಿ ವೈದ್ಯರು ಖಾಸಗಿಯಾಗಿ ಹೊರ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದಾಗಿದೆ. ಒಳ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಸರ್ಕಾರಿ ವೈದ್ಯರು ಈ ಆದೇಶವನ್ನು ಉಲ್ಲಂಘಿಸಿ ಖಾಸಗಿಯಾಗಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಅವರ ವಿರುದ್ಧ ಕಾನೂನು ಹಾಗೂ ನಾಗರಿಕ ಸೇವಾ ನಿಯಮಗಳಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

