Select Page

Advertisement

ಅಮ್ಮಿನಬಾವಿಯಲ್ಲಿ ಕ್ಯಾನ್ಸರ್ ಅರಿವು ಜಾಗೃತಿ ಮತ್ತು ಉಚಿತ ತಪಾಸಣೆ ಶಿಬಿರ

ಅಮ್ಮಿನಬಾವಿಯಲ್ಲಿ ಕ್ಯಾನ್ಸರ್ ಅರಿವು ಜಾಗೃತಿ ಮತ್ತು ಉಚಿತ ತಪಾಸಣೆ ಶಿಬಿರ

ಧಾರವಾಡ : ತಂಬಾಕು ಮತ್ತದರ ವಿಭಿನ್ನ ಉತ್ಪನ್ನಗಳು ಮನುಕುಲದ ಆರೋಗ್ಯಕ್ಕೆ ಮಾರಕವಾಗಿವೆ ಎಂದು ಹುಬ್ಬಳ್ಳಿ ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಕ್ಯಾನ್ಸರ್ ರೋಗ ಲಕ್ಷಣಗಳ ತಜ್ಞ ಡಾ. ಉಮೇಶ ಹಳ್ಳಿಕೇರಿ ಹೇಳಿದರು.

ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಮ್ಮಿನಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಜಂಟಿ ಆಶ್ರಯದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಅರಿವು ಜಾಗೃತಿ ಮತ್ತು ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ತಂಬಾಕು ಸೇವನೆಯಿಂದ ಮನುಷ್ಯನ ದೇಹ ಆರೋಗ್ಯದ ಹಿನ್ನೆಡೆಯೊಂದಿಗೆ ಕ್ಯಾನ್ಸರ್‌ದಂತಹ ರೋಗಗಳಿಗೆ ತುತ್ತಾಗುತ್ತದೆ ಎಂದರು.

ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹಾಗೂ ಪದ್ಮಶ್ರೀ ಡಾ. ಆರ್. ಬಿ. ಪಾಟೀಲ ನೇತೃತ್ವದ ನವನಗರದ ಕ್ಯಾನ್ಸರ್ ಆಸ್ಪತ್ರೆಯು ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕೊಡಮಾಡುವ ಅನುದಾನದಲ್ಲಿ ಇದೀಗ ಧಾರವಾಡ ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಪ್ರಸ್ತುತ ಅತ್ಯಾಧುನಿಕ ಉಪಕರಣಗಳನ್ನು ನವನಗರದ ಕ್ಯಾನ್ಸರ್ ಆಸ್ಪತ್ರೆ ಹೊಂದಿದೆ ಎಂದೂ ಡಾ. ಹಳ್ಳಿಕೇರಿ ಹೇಳಿದರು.

ಶಿಬಿರ ಉದ್ಘಾಟಿಸಿದ ಅಮ್ಮಿನಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬೀನಾ ಶೂರಪಾಲಿ ಮಾತನಾಡಿ, ಸಕಾಲಿಕವಾಗಿ ಸೂಕ್ತ ತಪಾಸಣೆಯಿಂದ ಪ್ರಾಥಮಿಕ ಹಂತದ ಕ್ಯಾನ್ಸರ್‌ಗೆ ನಿಖರ ನೆಲೆಯ ಚಿಕಿತ್ಸೆ ಲಭಿಸಿದಾಗ ಸೋಂಕಿನ ಅಪಾಯವನ್ನು ತಡೆಗಟ್ಟಿ ಈ ರೋಗವನ್ನು ನಿವಾರಿಸಬಹುದು. ಮನುಷ್ಯನ ದೇಹ ಕ್ಯಾನ್ಸರ್ ರೋಗಕ್ಕೆ ತುತ್ತಾಗದ ರೀತಿಯಲ್ಲಿ ಸ್ತ್ರೀ-ಪುರುಷರೆಲ್ಲರೂ ಅಗತ್ಯ ಕಾಳಜಿವಹಿಸಬೇಕೆಂದು ಡಾ. ಬೀನಾ ಮನವಿ ಮಾಡಿದರು.

ಆರೋಗ್ಯಾಧಿಕಾರಿ ಡಾ. ಪ್ರಿಯಾಂಕಾ ನಾಯ್ಕ, ಸಂತಾನಿ ದಂಡಿನ, ಮೊಹಮ್ಮದ್ ಜಬೀರ, ಶಿಲ್ಪಾ ಹೂಲಿಕಟ್ಟಿ, ವೆಂಕಟೇಶ ಲಮಾಣಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಉಚಿತ ತಪಾಸಣೆ : ರಕ್ತದಲ್ಲಿನ ಸಕ್ಕರೆ ಪ್ರಮಾಣ, ರಕ್ತದ ಒತ್ತಡ, ಪಿ.ಎ.ಪಿ. ಪರೀಕ್ಷೆ, ಮ್ಯಾಮೋಗ್ರಫಿ ಹಾಗೂ ಬಾಯಿ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು. 30 ಜನರ ಸ್ತನ ಕ್ಯಾನ್ಸರ್ ತಪಾಸಣೆ, 25 ಜನರ ಗರ್ಭಕಂಠದ ಕ್ಯಾನ್ಸರ್ ತಪಾಸಣೆ, 105 ಜನರ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಧಾರವಾಡ ಜಿಲ್ಲಾ ಶಾಖೆ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಉಚಿತವಾಗಿ ಮಾಸ್ಕ ವಿತರಿಸಲಾಯಿತು.

Advertisement

Leave a reply

Your email address will not be published. Required fields are marked *

error: Content is protected !!