ಅಮ್ಮಿನಬಾವಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಅಭಿನವ ಶಾಂತಲಿಂಗ ಶ್ರೀಗಳ ಇಷ್ಟಲಿಂಗ ಮಹಾಪೂಜೆ
ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಲೋಕಕಲ್ಯಾಣ ಮತ್ತು ವಿಶ್ವಶಾಂತಿ ಸಂಕಲ್ಪದೊಂದಿಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಶುಕ್ರವಾರ (ಜುಲೈ-25ರಂದು) ಆರಂಭಗೊಳ್ಳಲಿದೆ.
ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಒಂದು ತಿಂಗಳ ಈ ಇಷ್ಟಲಿಂಗ ಮಹಾಪೂಜಾ ಕೈಂಕರ್ಯಕ್ಕೆ ಚಾಲನೆ ನೀಡುವರು. ಆಗಷ್ಟ-23 ರವರೆಗೆ ನಿತ್ಯ ಪ್ರಾತಃಕಾಲ 8 ಗಂಟೆಗೆ ಮಠದ ಪ್ರಾಂಗಣದಲ್ಲಿ ನಡೆಯಲಿರುವ ಈ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಸಮಸ್ತ ಸದ್ಭಕ್ತ ಸಮೂಹ ಪಾಲ್ಗೊಳ್ಳಬಹುದಾಗಿದೆ.
*ನಿತ್ಯ ರುದ್ರಾಭಿಷೇಕ* : ಶ್ರೀಮಠದ ಕರ್ತೃ ಗದ್ದುಗೆಗೆ ಹಾಗೂ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಗೆ ನಿತ್ಯವೂ ಪ್ರಾತಃಕಾಲದಲ್ಲಿ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳು ಸೋಮಲಿಂಗಶಾಸ್ತಿç ಗುಡ್ಡದಮಠ, ಶಿವಯೋಗಿ ಹಿರೇಮಠ, ವಿನಾಯಕ ಹಿರೇಮಠ, ಈರಯ್ಯ ಹಿರೇಮಠ ಅವರಿಂದ ನಡೆಯಲಿವೆ.
*ಶ್ರಾವಣ ತಪೋನುಷ್ಠಾನ* : ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯ ಶ್ರಾವಣ ತಪೋನುಷ್ಠಾನದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳೂ ಸೇರಿದಂತೆ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ,
ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹತ್ತಿರದ ಗ್ರಾಮಗಳ ಸಕಲ ಶಿಷ್ಯ-ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಮಠದ ವ್ಯವಸ್ಥಾಪಕ ಶಿವಾನಂದಸ್ವಾಮಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


