DCC ಚುನಾವಣೆ : 16 ಕ್ಷೇತ್ರಕ್ಕೆ ಸಲ್ಲಿಕೆಯಾದ ನಾಮಪತ್ರ ಎಷ್ಟು…?
ಬೆಳಗಾವಿ : ಬರುವ ಅಕ್ಟೋಬರ್ 19 ರಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣಾ ನಾಮಪತ್ರ ಸಲ್ಲಿಸುವ ಕೊನೆ ದಿನ ಶನಿವಾರ ಸಂಜೆ ಮುಕ್ತಾಯಗೊಂಡಿತು. 16 ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲದಲಿಕೆಯಾಗಿವೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ 16 ಸ್ಥಾನಗಳಿಗೆ ಒಟ್ಟು 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಕೆಲ ಕ್ಷೇತ್ರದಲ್ಲಿ ಐದರಿಂದ ಆರು ಜನ ನಾಮಪತ್ರ ಸಲ್ಲಿಸಿದ್ದು ಇನ್ನೂ ಕೆಲ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ಒಂದೇ ನಾಮಪತ್ರ ಸಲ್ಲಿಕೆಯಾದ ಕ್ಷೇತ್ರ : ಬಾಲಚಂದ್ರ ಜಾರಕಿಹೊಳಿ ಬಣದ ಗೋಕಾಕ್ ನಿಂದ ಸ್ಪರ್ಧಿಸಿರುವ ಅಮರನಾಥ ಜಾರಕಿಹೊಳಿ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ ಹಾಗೂ ಚಿಕ್ಕೋಡಿಯಿಂದ ಗಣೇಶ್ ಹುಕ್ಕೇರಿ ಸ್ಪರ್ಧಿಸಿರುವ ಸ್ಥಾನಗಳಲ್ಲಿ ಕೇವಲ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದು ಇಲ್ಲಿ ಬಹುತೇಕ ಅವಿರೋಧ ಆಕ್ಕೆ ಸಾಧ್ಯತೆ ಇದೆ. ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಸೋಮವಾರ ಇದ್ದು ಇದೇ ದಿನ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಹೊರಬರಲಿದೆ.
ಸವದಿ ವಿರುದ್ಧ ಮೂರು ನಾಮಪತ್ರ : ಅಥಣಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಸ್ಪರ್ಧೆಗೆ ಮೂವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಾಜಿ ಶಾಸಕ ಮಹೇಶ್ ಕುಮಠಳ್ಳಿ, ಸಿದರಾಯ ಯಲಡಗಿ ಹಾಗೂ ಸಂಜೀವ ಅವಕ್ಕನವರ ನಾಮಪತ್ರ ಸಲ್ಲಿಸಿದ್ದು ಸಂಜೀವ ಸವದಿ ಬೆಂಬಲಿತರಾದ ಹಿನ್ನಲೆಯಲ್ಲಿ ಅವರು ವಾಪಸ್ ಪಡೆಯುವ ಸಾಧ್ಯತೆ ಇದೆ.
ಕತ್ತಿ ವಿರುದ್ಧ ರಾಜೇಂದ್ರ : ಹುಕ್ಕೇರಿ ಕ್ಷೇತ್ರದಿಂದ ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಇಬ್ಬರ ಮಧ್ಯೆ ಕಾಳಗ ಮುಂದುವರಿಯಲಿದೆ.
ರಾಮದುರ್ಗದಲ್ಲಿ ನಾಲ್ವರ ಮಧ್ಯೆ ಸ್ಪರ್ಧೆ..? ರಾಮದುರ್ಗ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದ್ದು ಹಾಲಿ ನಿರ್ದೇಶಕ ಶ್ರೀಕಾಂತ ಢವಣ ವಿರುದ್ಧ ಹಾಲಿ ಶಾಸಕ ಅಶೋಕ್ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಹಾಗೂ ಮಾರುತಿ ತುಪ್ಪದ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.


