ಡಿಸಿಸಿ ಬ್ಯಾಂಕಿಗೆ ಮತ್ತೆ ಕತ್ತಿ ಸಾಹುಕಾರ್ ಸಾರಥಿ…?
ಬೆಳಗಾವಿ : ಬೆಳಗಾವಿ ರಾಜಕೀಯ ವಲಯದಲ್ಲಿ ನಡೆಯುವ ಬೆಳವಣಿಗಳು ರಾಜ್ಯ ರಾಜಕಾರಣದಲ್ಲಿ ಈವರೆಗೆ ಸಾಕಷ್ಟು ಬದಲಾವಣೆ ತರಿಸಿದೆ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಉಂಟಾಗುವ ಏರುಪೇರನ್ನು ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸುವುದರಲ್ಲಿ ಸಂಶಯವಿಲ್ಲ.
ಬರುವ ಅಕ್ಟೋಬರ್ 19 ರಂದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು ಈಗಿನಿಂದಲೇ ಚುನಾವಣೆ ಬಿಸಿ ಹೆಚ್ಚುತ್ತಿದೆ. ಈ ಮಧ್ಯ ರಾಜ್ಯ ಬಿಜೆಪಿ ವಲಯದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆದಿದೆ.
ಕಳೆದ ಒಂದು ದಶಕಕ್ಕೂ ಅಧಿಕ ಸಮಯದವರೆಗೆ ಡಿಸಿಸಿ ಬ್ಯಾಂಕ್ ಆಡಳಿತ ಚುಕ್ಕಾಣಿ ಹಿಡಿದಿದ್ದ ಮಾಜಿ ಸಂಸದ ರಮೇಶ್ ಕತ್ತಿ ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನೇನು ಚುನಾವಣೆ ಹೊಸ್ತಿಲಿನಲ್ಲಿರುವ ಸಂದರ್ಭದಲ್ಲೇ ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ಚುಕ್ಕಾಣಿಗಾಗಿ ಸಾಹುಕಾರ್ ದಾಳ ಉರುಳಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಾಧ್ಯವಾದಷ್ಟು ತಮ್ಮದೇ ಪಕ್ಷದ ಪ್ರಭಾವಿ ಮುಖಂಡರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಸರ್ಕಸ್ ನಡೆಸಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲೇ ಅತ್ಯಂತ ದೊಡ್ಡ ಸಹಕಾರಿ ಸಂಘವಾದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿಗೆ ಸದ್ದಿಲ್ಲದೆ ಬಿಜೆಪಿ ತಂತ್ರ ಹೆಣೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಬಿಜೆಪಿ ನಾಯಕರೊಬ್ಬರು ರಾಜ್ಯ ನಾಯಕರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ನಮ್ಮದೇ ಪಕ್ಷದ ನಾಯಕರ ಆಯ್ಕೆಗೆ ಹೆಚ್ಚು ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ತಮ್ಮದೇ ಪಕ್ಷದ ಜಿಲ್ಲಾ ನಾಯಕರನ್ನು ಸೇರಿಸಿ ರಮೇಶ್ ಕತ್ತಿ ಆಯ್ಕೆಗೆ ಸೂಚಿಸುವ ಸಾಧ್ಯತೆ ಇದೆ.
ಇನ್ನೂ ಡಿಸಿಸಿ ನಿರ್ದೇಶಕ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಲ ಸಾಯಕರು ತೆರೆಮರೆಯಲ್ಲಿ ಸಾಕಷ್ಟು ತಂತ್ರ ಹೆಣೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲ ಕಾಂಗ್ರೆಸ್ ನಾಯಕರು ಈಗಿನಿಂದಲೇ ಡಿಸಿಸಿ ಬ್ಯಾಂಕ್ ಅಧಿಕಾರದ ಮೇಲೆ ಕಣ್ಣಿಟ್ಟಿರುವುದು ಬಹಿರಂಗವಾಗಿ ಕಾಣುತ್ತಿರುವುದಂತು ಸತ್ಯ.


