ಬೆಳಗಾವಿ : ಬರ ಪೀಡಿತ ತಾಲೂಕುಗಳನ್ನು ಸರಕಾರ ಘೋಷಣೆ ಮಾಡಿದ್ದು ರಾಜ್ಯದ 101 ತಾಲೂಕುಗಳ ಪೈಕಿ ಬೆಳಗಾವಿಯಿಂದ ಯಾವುದೇ ತಾಲೂಕನ್ನು ಪರಿಗಣಿಸದಿರುವುದಕ್ಕೆ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ವಿಪರ್ಯಾಸವೆಂದರೆ ಬೆಳಗಾವಿ ಜಿಲ್ಲೆಯ ಯಾವೊಂದೂ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಸರಕಾರ ಗಮನಿಸಿಲ್ಲ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬರಗಾಲ ಪೀಡಿತ ತಾಲೂಕುಗಳಿಗೆ ಭೇಟಿನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಸರಕಾರ ಹೊರಡಿಸಿರುವ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಯಾವೊಂದು ತಾಲೂಕು ಸೇರ್ಪಡೆಯಾಗಿಲ್ಲ.
ಜಿಲ್ಲೆಯ ಹದಿನೈದು ತಾಲೂಕುಗಳ ಪೈಕಿ ಈ ಬಾರಿ 13 ತಾಲೂಕುಗಳಲ್ಲಿ ಮಳೆ ಅಭಾವ ಉಂಟಾಗಿದೆ. ಸವದತ್ತಿ, ರಾಮದುರ್ಗ, ಯರಗಟ್ಟಿ ತಾಲೂಕುಗಳಲ್ಲಿ ರೈತ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಇನ್ನೂ ಕೇವಲ ಮೂರು ತಾಲೂಕಿನಲ್ಲಿ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಜಿಲ್ಲೆಯಾದ್ಯಂತ ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಂಕಷ್ಟ ಇದ್ದರೂ ರಾಜ್ಯ ಸರಕಾರ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೆಳಗಾವಿಯನ್ನು ನಿರ್ಲಕ್ಷ್ಯಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.



