ಬೆಳಗಾವಿ : ಸೈಬರ್ ವಂಚನೆ : ಮಾತ್ರೆ ನುಂಗಿ, ಕತ್ತು ಸೀಳಿಕೊಂಡು ದಂಪತಿ ಆತ್ಮಹತ್ಯೆ
ಬೆಳಗಾವಿ : ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಡಿಯಾಂಗೋ ನಜರತ್(83) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದರೆ ಅವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿ ಕ್ರೈಂ ಬ್ರ್ಯಾಂಚ್ ನಿಂದ ಕರೆ ಮಾಡುತ್ತಿದ್ದೆವೆ. ಕ್ರೈಂ ಒಂದರಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ವೃದ್ಧ ದಂಪತಿಗಳಿಗೆ ವಿಡಿಯೋ ಕಾಲ್ ಮಾಡಿ ವಂಚಕರು ಬೆದರಿಕೆ ಹಾಕಿದ್ದಾರೆ.
ಬಳಿಕ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ವಂಚಕರ ಐದು ಲಕ್ಷ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಣ ಕೊಟ್ಟ ಬಳಿಕವೂ ಸಹ ಮತ್ತೆ ವಂಚಕರ ಜಾಲ ವಿಡಿಯೋ ಕಾಲ್ ಮಾಡಿ ಧಮ್ಕಿ ಹಾಕಿದೆ. ಹಣ ಕೊಡದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ ಎಂದು ಹೆದರಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ದಂಪತಿಗಳು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವೃದ್ದ ದಂಪತಿಗಳ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾಣಿಸಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

