Select Page

ಚಿಕ್ಕೋಡಿ : ವಿದ್ಯಾರ್ಥಿಗಳಿಗೆ ಲೈಂಗಿಕ ‌ಕಿರುಕುಳ‌ ನೀಡುತ್ತಿದ್ದ ಶಿಕ್ಷಕನಿಗೆ ಧರ್ಮದೇಟು – ಅಮಾನತಿಗೆ ಡಿಡಿಪಿಐ ಆದೇಶ

ಚಿಕ್ಕೋಡಿ : ವಿದ್ಯಾರ್ಥಿಗಳಿಗೆ ಲೈಂಗಿಕ ‌ಕಿರುಕುಳ‌ ನೀಡುತ್ತಿದ್ದ ಶಿಕ್ಷಕನಿಗೆ ಧರ್ಮದೇಟು – ಅಮಾನತಿಗೆ ಡಿಡಿಪಿಐ ಆದೇಶ




ಚಿಕ್ಕೋಡಿ : 10ನೇ ತರಗತಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನೊಬ್ಬನಿಗೆ ಪೋಷಕರು ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಶೈಲ್ ಕುಂಬಾರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕನ್ನಡ ವಿಷಯದಲ್ಲಿ ಉತ್ತೀರ್ಣಗೊಳಿಸುವುದಾಗಿ ಆಮಿಷವೊಡ್ಡಿ, ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿ ಹಾಗೂ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೇ ರೀತಿಯ ಕಿರುಕುಳ ನೀಡಿರುವ ಆರೋಪದ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪೋಷಕರು ಶಾಲೆಗೆ ನುಗ್ಗಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ.

ಶಾಲಾ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಶಿಕ್ಷಕ ಶ್ರೀಶೈಲ್ ಕುಂಬಾರನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಅಮಾನತಿಗೆ ಆದೇಶ : ಪ್ರಕರಣದ ಗಂಭೀರತೆ ಅರಿತ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸೀತಾರಾಮು ಅವರು ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಯ ಮುಖ್ಯಶಿಕ್ಷಕರಿಂದ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದರು.

ಬಳಿಕ ಪ್ರತಿಕ್ರಿಯಿಸಿದ ಡಿಡಿಪಿಐ ಸೀತಾರಾಮು, ಪೋಷಕರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇವೆ. ಇಂತಹ ಘಟನೆಗಳು ಆಗಬಾರದು ಮತ್ತು ಮುಂದೆಯೂ ಮರುಕಳಿಸಬಾರದು. ಆರೋಪಿ ಶಿಕ್ಷಕನನ್ನು ಕೂಡಲೇ ಅಮಾನತು ಮಾಡಲಾಗುವುದು.

ಅಲ್ಲದೆ, ಪ್ರಕರಣದ ಕುರಿತು ಚಿಕ್ಕೋಡಿ ಬಿಇಒ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!