
ಬಾಣಂತಿಯರ ಸಾವಿನ ಕಾರಣ ಬಿಚ್ಚಿಟ್ಟ ಬಿಜೆಪಿ ಸತ್ಯಶೋಧನಾ ಸಮಿತಿ

ಬೆಳಗಾವಿ : ರಾಜ್ಯದ ಜನರಿಗೆ ಕಾಂಗ್ರೆಸ್ ಸರಕಾರ ಸಾವಿನ ಭಾಗ್ಯ ನೀಡಿದೆ. ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ನಿರಂತರವಾಗಿ ಸಾಗಿದ್ದು, ಈ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿ ರಾಜ್ಯದ ವಿವಿಧ ಭಾಗಗಳಿಂದ ಮಾಹಿತಿ ಕಲೆ ಹಾಕಿದೆ ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ರಾಜ್ಯದ ಜನರಿಗೆ ಸರಕಾರ ಆತ್ಮಹತ್ಯೆ ಭಾಗ್ಯ ನೀಡಿದೆ. ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಔಷಧ ಪೂರೈಕೆಯಿಂದ ಶಿಶು ಹಾಗೂ ಬಾಣಂತಿಯರ ಸಾವು ಸಂಭವಿಸುತ್ತಿವೆ. ಕೇಂದ್ರ ಸರ್ಕಾರ ಬಾಣಂತಿಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ರಾಜ್ಯ ಸರಕಾರ ವಿಫಲವಾಗಿದ್ದು ಯೋಜನೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸತ್ಯಶೋಧನಾ ಸಮಿತಿ ಬಾಣಂತಿಯರ ಸಾವು ಹಾಗೂ ಶಿಶು ಮರಣದ ಕುರಿತು ರಾಜ್ಯಾದ್ಯಂತ ಆಸ್ಪತ್ರೆ ಸೇರಿದಂತೆ ಮೃತರ ಕುಟುಂಬಗಳಿಗೆ ಭೇಟಿನೀಡಿ ಅವರ ನೋವು ಆಲಿಸುವ ಕೆಲಸ ಮಾಡಿದೆ. ಮರಣ ಹೊಂದಿನ ಬಾಣಂತಿಯರ ಕುಟುಂಬಕ್ಕೆ ಸರಕಾರ 25 ಲಕ್ಷ ಪರಿಹಾರ ನೀಡಬೇಕು. ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ದತ್ತು ಪಡೆದುಕೊಳ್ಳುವ ನಿಯಮ ರೂಪಿಸಬೇಕು ಎಂದರು.
ಬಾಣಂತಿಯರ ಸಾವಿನ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಬಾಣಂತಿಯರ ಸಾವಿನ ಪ್ರಕರಣ ಕುರಿತು ಹೈಕೋರ್ಟ್ ನ್ಯಾಯಾಧೀಶ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸರಿಯಾದ ವೇತನ ನೀಡುವಂತೆ ಸಮೀತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸಿಮಗೌಡರ, ರಾಜ್ಯ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ತುಂಗಳ, ರಾಜ್ಯ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಸಾಮಾಜಿಕ ಜಾಲತಾಣ ರಾಜ್ಯ ಸಹ ಸಂಚಾಲಕ ಪ್ರದೀಪ್ ಕದಾಡಿ, ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯ ನಿತಿನ್ ಚೌಗಲೆ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕೆಕರೆ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸುಭಾಷ್ ಸಣ್ಣವೀರಪ್ಪನವರ,ಮನೋಜ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಾಣಂತಿಯರು ಹಾಗೂ ಶಿಶು ಸಾವಿಗೆ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಪ್ರಮುಖ ಕಾರಣ. ಕೇಂದ್ರ ಸರ್ಕಾರ ಬಾಣಂತಿಯರಿಗೆ ನೀಡುವ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು.
ಡಾ. ಸೋನಾಲಿ ಸರ್ನೋಬತ್
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ