41 ನವಜಾತ ಶಿಶು ಸಾವು ಪ್ರಕರಣ : ಬಿಮ್ಸ್ ನಿರ್ದೇಶಕರು ಕೊಟ್ಟ ಕಾರಣ ಏನು…?
ಬೆಳಗಾವಿ : ಬಿಮ್ಸ್ ನ ಹೆರಿಗೆ ವಿಭಾಗದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 41 ನವಜಾತ ಶಿಶುಗಳ ಸಾವು ಆಗಿದ್ದು ನಿಜ ಎಂದು ನಿರ್ದೇಶಕ ಡಾ. ಅಶೋಕ್ ಶೆಟ್ಟಿ ಒಪ್ಪಿಕೊಂಡಿದ್ದರು, ಶಿಶುಗಳ ಸಾವಿಗೆ ನಾನಾ ಕಾರಣ ಹೇಳಿ ನುಣುಚಿಕೊಂಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಿಂದ ಈವರೆಗೂ ಬಿಮ್ಸ್ ನಲ್ಲಿ 41 ನವಜಾತ ಶಿಶುಗಳು ಮರಣ ಹೊಂದಿದ್ದು, ಇದಕ್ಕೆ ಆಸ್ಪತ್ರೆಯಲ್ಲಿನ ಏರ್ ಕಂಪ್ರೆಸರ್ ಕೆಟ್ಟಿರುವುದೇ ಕಾರಣ ಎಂದು ಆರೋಪ ಮಾಡಲಾಗಿತ್ತು.
ಕಳೆದ ಮೂರು ತಿಂಗಳಿನಿಂದ ಒಂದು ಏರ್ ಕಂಪ್ರೆಸರ್ ಹಾಳಾಗಿದ್ದು ಈವರೆಗೂ ದುರಸ್ತಿ ಕಾರ್ಯ ನಡೆದಿದಲ್ಲ. ಸಧ್ಯ ಆಸ್ಪತ್ರೆಯಲ್ಲಿ ಒಂದೇ ಏರ್ ಕಂಪ್ರೆಸರ್ ಇದ್ದು ಇದರಿಂದಲೇ ನವಜಾತ ಶಿಶುಗಳ ಸಾವಿಗೆ ಕಾರಣ ಎಂದು ಗಂಭೀರ ಆರೋಪ ಕೇಳಿಬಂದಿತ್ತು.
ನವಜಾತ ಶಿಶುಗಳ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ಕಳೆದ ಮೂರು ತಿಂಗಳ ಅವಧಿಯಲ್ಲಿ 41 ಶಿಶುಗಳು ಸಾವಣಪ್ಪಿದ್ದು ಸತ್ಯ ಆದರೆ ಆ ಸಾವಿಗೆ ಬೇರೆ ಕಾರಣ ಇದೇ ಎಂದು ನುಣುಚಿಕೊಳ್ಳುವ ಕೆಲಸ ಮಾಡಿದ್ದು ಅನುಮಾನ ಮೂಡಿಸಿದೆ.
ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ಶೈಲೇಶ್ ಪಾಟೀಲ್ ಮಾತನಾಡಿ, ನವಜಾತ ಶಿಶುಗಳ ಸಾವಿಗೆ ಅವಧಿ ಪೂರ್ವ ಪ್ರಸವ, ಶಿಶುಗಳಲ್ಲಿ ತೂಕ ಕಡಿಮೆ ಹಾಗೂ ಇತರೆ ಸಮಸ್ಯೆಯಿಂದ ಸಾವಣಪ್ಪಿವೆ ಎಂದು ಮಾಹಿತಿ ನೀಡಿದ್ದರು.
ಒಟ್ಟಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 41 ಶಿಶುಗಳ ಸಾವು ಅತ್ಯಂತ ಗಂಭೀರವಾಗಿದ್ದು ಜಿಲ್ಲಾಡಳಿತ ಈ ಕುರಿತು ತನಿಖೆ ನಡೆಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.


