ಸರ್ಕಾರಿ ಕೆಲಸ ಬದಿಗಿಟ್ಟು ಸಂಘ ಕಟ್ಟಿದ ಅಧಿಕಾರಿಗಳು : ಜಿಲ್ಲಾ ಪಂಚಾಯತಿಯಲ್ಲಿ ನಿರಾಶ್ರಿತರ ಕೇಂದ್ರ ತೆರೆದ ಅಧಿಕಾರಿ ಯಾರು…?
ಬೆಳಗಾವಿ : ಸರ್ಕಾರದ ಕೆಲಸವೆಂದರೆ ದೇವರೆ ಕೆಲಸ….ಆದರೆ ಕೆಳ ಹಂತದ ಕೆಲ ಅಧಿಕಾರಿಗಳ ದೇವರ ಕೆಲಸ ಬಿಡಿ ಜನಸಾಮಾನ್ಯರಿಗೂ ಕಂಟಕರಾಗಿದ್ದಾರೆ. ಅಷ್ಟೇ ಅಲ್ಲದೆ ತಾವು ಕೆಲಸ ಮಾಡುವ ಸ್ಥಳವನ್ನೇ ಇನ್ನೊಬ್ಬ ನೌಕರನ ಸಮಸ್ಯೆ ಪರಿಹರಿಸುವ ಕೇಂದ್ರವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.
ಹೌದು ಹೊಸ, ಹೊಸ ಚಿಂತನೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾ ಪಂಚಾಯತಿ ಸಿಇಒ ಕಾರ್ಯ ಒಂದು ಕಡೆಯಾದರೆ, ಇವರದೇ ಕಚೇರಿಯಲ್ಲಿ ಕೆಲ ಅಧಿಕಾರಿಗಳು ರಾಜಕೀಯ ಪ್ರಭಾವ ಬಳಸಿಕೊಂಡು ಸಂಬಂಧಪಟ್ಟಿರದ ಇಲಾಖೆಗಳಲ್ಲಿ ಮೂಗು ತೋರಿಸುವ ಮಟ್ಟಿಗೆ ಬಲಿಷ್ಠರಾದರಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನೌಕರರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಆರೋಪ ಕೇಳಿಬಂದಿತ್ತು. ಜೊತೆಗೆ 80 ಕ್ಕೂ ಅಧಿಕ ನೌಕರರು ಸಹಿ ಮಾಡಿ ಅಳಲು ತೋಡಿಕೊಂಡಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮಾನಿಟರ್ ಮಾಡುವ ಕೆಲಸ ಮಾಡುತ್ತಿರುವ ಆರೋಪ ಬಲವಾಗಿ ಇದೆ. ಈ ಕುರಿತು ಕೆಲ ಸಾಕ್ಷ್ಯಗಳು ನಮ್ಮ ಬಳಿ ಇವೆ.
ಆಯಾ ಇಲಾಖೆಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಿಸುವ ಹಕ್ಕನ್ನು ಸಂವಿಧಾನವೇ ಕೊಟ್ಟಿದೆ. ಆದರೆ ಜಿಲ್ಲಾ ಪಂಚಾಯತಿ ಅಂತಹ ಪ್ರಮುಖ ಕಚೇರಿಯಲ್ಲಿ ಕುಳಿತ ಕೆಳ ಹಂತದ ಅಧಿಕಾರಿ ತನಗೆ ಸಂಬಂಧವಿಲ್ಲದ ಇಲಾಖೆಯಲ್ಲಿ ನಡೆದ ತಪ್ಪುಗಳನ್ನು ಮುಚ್ಚಿ ಹಾಕಲು ನಾನಾ ರೀತಿಯ ಕಸರತ್ತು ಮಾಡಲು ಏನು ಕಾರಣ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ರಾಜ್ಯದಲ್ಲಿ ಬಲಿಷ್ಠ ನಾಯಕತ್ವ ಹೊಂದಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ಕೆಲಸ ಮಾಡುವ ಸಚಿವರ ತವರು ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ಮಾಡುತ್ತಿರುವ ಅವಾಂತರಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಮೂಡುವುದು ಸಹಜ. ಅಷ್ಟೇ ಅಲ್ಲದೆ ತಮ್ಮ ಮುಂದೆ ಅನಾಚಾರ ನಡೆದರು ಜಿಲ್ಲೆಯ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸದೆ ಕೈ ಕಟ್ಟಿ ಕುಳಿತುಕೊಳ್ಳಲು ಏನು ಕಾರಣ ಎಂಬುದು ತಿಳಿಯುತ್ತಿಲ್ಲ.


