ಬೆಳಗಾವಿ ಚಳಿಗಾಲ ಅಧಿವೇಶನ ಕುರಿತು ಸಭಾಧ್ಯಕ್ಷ ಖಾದರ್ ಮಹತ್ವದ ಮಾಹಿತಿ
ಬೆಳಗಾವಿ : ಬರುವ ಡಿಸೆಂಬರ್ 9 ರಿಂದ 20 ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತು ಸಚಿವ ಸಂಪುಟದ ನಿರ್ಧಾರದ ಬಳಿಕ ಸಿಎಂ ಘೋಷಣೆ ಮಾಡಲಿದ್ದಾರೆ ಎಂದು
ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಳಿಗಾಲ ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ಖಾದರ್. ಬೆಳಗಾವಿಯಲ್ಲಿ ಡಿಸೆಂಬರ್ ನಲ್ಲಿ ಚಳಿಗಾಲ ಅಧಿವೇಶನ ನಡೆಸಲು ನಿರ್ಧಾರ ಮಾಡಲಾಗಿದ್ದು, ನಿರ್ಧಿಷ್ಟ ದಿನಾಂಕವನ್ನು ಸಚಿವ ಸಂಪುಟ ನಿರ್ಧಾರ ತಗೆದುಕೊಳ್ಳಲಿದೆ ಎಂದರು.
ಉ.ಕ. ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲು ಇಡಲಾಗುವುದು. ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಹಾಗೂ ಕಿತ್ತೂರು ಚನ್ನಮ್ಮ ವಿಜಯೋತ್ಸವದ 200 ನೇ ವರ್ಷಾಚರಣೆ ಕುರಿತು ಅಧಿವೇಶನ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು. ಶಾಸಕರ ಭವನ ಸೇರಿದಂತೆ ಶಾಶ್ವತ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದರು.
ಕಳೆದ ವರ್ಷ ಅತ್ಯುತ್ತಮ ರೀತಿಯಲ್ಲಿ ಅಧಿವೇಶನ ನಡೆದಿದ್ದು, ಈ ಬಾರಿ ಇನ್ನಷ್ಟು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಅಧಿವೇಶನದ ವೇಳೆ ಪ್ರತಿಭಟನೆಗಳಿಗೆ ಪ್ರತಿಬಾರಿಯಂತೆ ಅವಕಾಶ ನೀಡಲಾಗುವುದು. ಪ್ರಮುಖ ಸಮಸ್ಯೆಗಳ ಕುರಿತು ಆಯಾ ಇಲಾಖೆಯ ಸಚಿವರ ಮಟ್ಟದಲ್ಲಿ ಚರ್ಚೆ ನಡೆಸಲು ನಿರ್ದೇಶನ ನೀಡಲಾಗುವುದು ಎಂದು ಖಾದರ್ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ,, ಡಿಸೆಂಬರ್ 9 ರಿಂದ 20 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ಸಾಧ್ಯತೆಯಿದೆ. ಆದರೆ ಇನ್ನೂ ದಿನಾಂಕ ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಯನ್ನು ಆರಂಭಿಸಲಾಗಿದೆ. ಕಾಂಗ್ರೆಸ್ ಅಧಿವೇಶನ ಮತ್ತಿತರ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸಲಿದೆ. ಆದಷ್ಟು ಬೇಗನೇ ಶಾಸಕರ ಭವನ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಆಸಿಫ್(ರಾಜು) ಸೇಠ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

