ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು…?
ಬೆಳಗಾವಿ : ಸಧ್ಯ ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ನಿಧಾನಕ್ಕೆ ಏರುತ್ತಿದೆ. ಲೋಕ ಸಮರದಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿಯುವ ನಿಟ್ಡಿನಲ್ಲಿ ಪ್ರಭಲ ರಾಜಕೀಯ ಪಕ್ಷಗಳ ನಡುವೆ ಗದ್ದುಗೆ ಗುದ್ದಾಟ ಏರ್ಪಟ್ಟಿದೆ. ಈ ನಡುವೆ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಪೈಪೋಟಿ ಏರ್ಪಟ್ಟಿದೆ.
ಹೊಂದಾಣಿಕೆ ರಾಜಕಾರಣದ ತವರು ಎಂದೇ ಕರೆಯುವ ಬೆಳಗಾವಿ ಜಿಲ್ಲೆಯಲ್ಲಿ ಯಾವ ಸಮಯಕ್ಕೆ ಯಾವೆಲ್ಲಾ ರಾಜಕೀಯ ಚದುರಂಗದಾಟ ನಡೆಯುತ್ತವೆ ಎಂಬುದನ್ನು ಊಹಿಸಲಾಗದು. ಜಿಲ್ಲೆಯಲ್ಲಿ ಪಕ್ಷ ಕೇಂದ್ರಿತ ರಾಜಕಾರಣಕ್ಕಿಂತ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಜೆ ಹೆಚ್ಚಿನ ಮಹತ್ವ. ಕೇವಲ ಚುನಾವಣೆಯಾಗದೆ, ಪ್ರಭಲ ಮನೆತನಗಳ ನಡುವಿನ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಾಡಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ರಾಜ್ಯದ ಗಮನಸೆಳೆಯುತ್ತಿದೆ.
ಕ್ಷೇತ್ರದ ಇತಿಹಾಸ : ಭಾರತ ಸ್ವಾತಂತ್ರವಾದ ನಂತರದಲ್ಲಿ ಮುಂಬೈ ಪ್ರೆಸಿಡೆನ್ಸಿ ವ್ಯಾಪ್ತಿಗೆ ಸೇರಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ನ ಭದ್ರ ಕೋಟೆಯಾಗಿತ್ತು. 1952 ರಿಂದ 1991 ರ ವರೆಗೆ ನಿರಂತರವಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಮೇಲೆ ಕೈ ಹಿಡಿತ ಹೊಂದಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಎಸ್.ಬಿ ಸಿದ್ನಾಳ್ 4 ಬಾರಿ ಗೆಲುವು ಸಾಧಿಸಿ ಅತಿ ಹೆಚ್ಚು ಬಾರಿಗೆ ಸಂಸದರಾಗಿ ಇತಿಹಾಸ ನೀರ್ಮಿಸಿದ್ದರು.
1991 ರ ನಂತರ ಬಿಜೆಪಿ ಒಂದು ಅವಧಿಗೆ, ಜಾತ್ಯಾತೀತ ಜನತಾದಳ ಹಾಗೂ ಕಾಂಗ್ರೆಸ್ ಒಮ್ಮೆ ಗೆಲುವು ಸಾಧಿಸಿತ್ತು. 2004 ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ನಿರಂತರ ಗೆಲುವು ಸಾಧಿಸಿದ್ದರು. ಅಂಗಡಿ ಅಕಾಲಿಕ ನಿಧನದಿಂದ ತೆರವಾದ ಸಂದರ್ಭದಲ್ಲಿ 2021 ರಲ್ಲಿ ಇವರ ಪತ್ನಿ ಮಂಗಳಾ ಅಂಗಡಿ ಬಿಜೆಪಿಯಿಂದ ಗೆದ್ದಿದ್ದು, ಸಧ್ಯ ಬಿಜೆಪಿ ಭದ್ರ ಕೋಟೆಯಾಗಿ ಬೆಳಗಾವಿ ಕ್ಷೇತ್ರ ಮಾರ್ಪಾಡಾಗಿದೆ.
ಟಿಕೆಟ್ ಗಾಗಿ ಪೈಪೋಟಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ಕೊಂಚ ಚಿಕ್ಕದಾಗಿದ್ದು, ಬಿಜೆಯಲ್ಲಿ ಮಾತ್ರ ಮಂಗನ ಬಾಲದಂತೆ ಟಿಕೆಟ್ ಆಕಾಂಕ್ಷಿತರ ಪಟ್ಟಿ ದೊಡ್ಡದಾಗುತ್ತಾ ಸಾಗಿದೆ. ಈ ನಡುವೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಲು ಎಂಇಎಸ್ ಹುಮ್ಮಸ್ಸಿನಲ್ಲಿದ್ದು ಈ ಬಾರಿ ಪ್ರಭಲ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಒಬ್ಬರಿಗೆ ಸೋಲಿನ ರುಚಿ ಮುಟ್ಟಿಸುವ ಕೆಲಸ ಮಾಡಲು ಸಜ್ಜಾದಂತೆ ಕಾಣುತ್ತಿದೆ.
ಬದಲಾದ ರಾಜಕೀಯ ಸಮೀಕರಣ : ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಸ್ಪರ್ಧಿಸಿದ್ದ 2019 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಮೋದಿ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಆದರೆ ಕೋವಿಡ್ ಗೆ ತುತ್ತಾಗಿ 2020 ರಲ್ಲಿ ಅಕಾಲಿಕ ನಿಧನರಾದ ಹಿನ್ನೆಲೆ ಅವರ ಪತ್ನಿ ಮಂಗಳಾ ಅಂಗಡಿ ಉಪ ಚುನಾವಣೆ ಸ್ಪರ್ಧಿಸಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಒಟ್ಟು 3 ಲಕ್ಷ 91 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಅವರು 63.22 ಪ್ರತಿಶತ ಮತ ಪಡೆದಿದ್ದರು. ಆದರೆ ಅವರ ಪತ್ನಿ ಸ್ಪರ್ಧಿಸಿದ್ದ ಉಪ ಚುನಾವಣೆಯಲ್ಲಿ ಗೆಲುವಿನ ಅಂತರ ಕೇವಲ 5240 ಮತಗಳಿಗೆ ಬಂದು ನಿಂತಿತ್ತು. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಪ್ರಭಲ ಅಭ್ಯರ್ಥಿ ಆಗಿದ್ದು. ಕೊನೆಯ ಕ್ಷಣದಲ್ಲಿ ಮಂಗಳಾ ಅಂಗಡಿ ಗೆಲುವಿನ ನಗೆ ಬೀರಿದ್ದು ಸಧ್ಯ ಇತಿಹಾಸ.
ಟಿಕೆಟ್ ಆಕಾಂಕ್ಷಿಗಳ ವಿವರ :
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು : ಮಹಾಂತೇಶ್ ಕವಠಗಿಮಠ, ಸಂಜಯ್ ಪಾಟೀಲ್, ಅನಿಲ್ ಬೆನಕೆ, ಶಂಕರಗೌಡ ಪಾಟೀಲ್, ಮಹಾಂತೇಶ್ ವಕ್ಕುಂದ, ರಮೇಶ್ ದೇಶಪಾಂಡೆ, ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ ಹಿರೇಮಠ, ಡಾ. ಸೋನಾಲಿ ಸರ್ನೋಬತ್, ಡಾ. ರವಿ ಪಾಟೀಲ್.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು : ವಿನಯ್ ನಾವಲಗಟ್ಟಿ, ಮೃನಾಲ್ ಹೆಬ್ಬಾಳ್ಕರ್, ಕಿರಣ್ ಸಾಧುಣ್ಣವರ್, ಪ್ರಿಯಾಂಕಾ ಜಾರಕಿಹೊಳಿ.
ಎಂಇಎಸ್ ಟಿಕೆಟ್ ಆಕಾಂಕ್ಷಿಗಳು : ರಮಾಕಾಂತ್ ಕೊಂಡಸ್ಕರ್, ಶುಭಂ ಸೆಳಕೆ.


