ಬೆಳಗಾವಿ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಜೆ ಎನ್ ಯು ಪ್ರಾಧ್ಯಾಪಕ ಹಾಗೂ ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ ವಿರುದ್ಧ ಮಹಿಳಾ ಮೋರ್ಚಾ ಸದಸ್ಯೆಯರು ಪ್ರತಿಭಟನೆ ನಡೆಸಿ ಬೆಳಗಾವಿ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದರು.
ಸೋಮವಾರ ನಗರದ ಕಾಂಗ್ರೆಸ್ ಭವನದ ಎದುರಿಗೆ ಸೇರಿದ್ದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕಾಂಗ್ರೆಸ್ ಸಂಸದನ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರಕರಣದ ಕುರಿತು ಕಾಂಗ್ರೆಸ್ ಪಕ್ಷ ಮೌನವಹಿಸಿರುವ ಕ್ರಮ ಖಂಡನೀಯ, ಮಹಿಳೆಯರ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್, ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂಬ ಘೋಷಣೆ ನೀಡಿದ ಕಾಂಗ್ರೆಸ್, ಮಹಿಳೆಯರ ಗೌರವ ಮತ್ತು ಸುರಕ್ಷತೆಯ ವಿಷಯದಲ್ಲಿ ತನ್ನ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸಬೇಕು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಈ ಪ್ರಕರಣದ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.
ಕಾಂಗ್ರೆಸ್ ಸಂಸದನ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪ್ರಾಧ್ಯಾಪಕನ ವಿರುದ್ಧ ಈಗಾಗಲೇ ಜೆ ಎನ್ ಯು ಕ್ರಮ ಕೈಗೊಂಡಿದ್ದು ಸೇವೆಯಿಂದ ವಜಾಗೊಳಿಸಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ಈವರೆಗೂ ಒಂದು ಮಾತು ಆಡಿಲ್ಲ. ಮಹಿಳೆಯರ ಕುರಿತು ಇವರ ನಿಲುವು ಜನರಿಗೆ ತಿಳಿಯಲಿ ಎಂದರು.
ಈ ವೇಳೆ ಮಹಿಳಾ ಮೋರ್ಚಾ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷೆ ಡಾ. ನಯನಾ ಭಸ್ಮೆ, ಶಿಲ್ಪಾ ಕೆಕರೆ, ಉಜ್ವಲಾ ಬಡವನಾಚೆ, ಸುನಿತಾ ಪಾಟೀಲ್ ಸೇರಿದಂತೆ ಮಹಿಳಾ ಮೋರ್ಚಾ ಸದಸ್ಯೆಯರು ಉಪಸ್ಥಿತರಿದ್ದರು.





