ಬೆಳಗಾವಿ : ಅಥಣಿ ಪುರಸಭೆ ಅಧಿಕಾರಿ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಕಿಡಿಕಾರಿದ್ದು, ಅಕ್ರಮಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದು ಮಾತ್ರವಲ್ಲದೆ ಅಧಿಕಾರಿ ಬೆವರಿಳಿಸುವ ಕೆಲಸ ಮಾಡಿದರು.
ಅಕ್ರಮ ಕಟ್ಟಡ ಕಾಮಗಾರಿಗೆ ಅನುಮತಿ ನೀಡಿರುವ ಆರೋಪ ಸೇರಿದಂತೆ ಅಥಣಿಯ ಹತ್ತಾರು ಸಮಸ್ಯೆಗಳ ಕುರಿತು ಲೋಕಾಯುಕ್ತಕ್ಕೆ ದಾಖಲಾದ ಪ್ರಕದಣದ ಕುರಿತು ಯಾವುದೇ ಕ್ರಮ ಕೈಗೊಳ್ಳದ ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಗುಡಿಮನಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಬೆಂಡೆತ್ತುದರು.
ಹಾಲಟ್ಟಿಯಲ್ಲಿನ ಎಂ.ಕೆ.ಕವಟಗಿಮಠ ಸಭಾ ಭವನದಲ್ಲಿ ಶುಕ್ರವಾರ (ಸೆ.25) ಜರುಗಿದ ಚಿಕ್ಕೋಡಿ ಉಪವಿಭಾಗಕ್ಕೆ ಸಂಬಂಧಪಟ್ಟ ಬಾಕಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಪ್ರತಿಕ್ರಿಯೆ ನೀಡಿದರು.
ಅಥಣಿ ಪುರಸಭೆ ಮುಖ್ಯಾಧಿಕಾರಿಗೆ ನಗುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದಲ್ಲಿರುವ ಸುಮಾರು 8 ಕೋಟಿ ಜನಸಂಖ್ಯೆಗೆ ಉತ್ತಮ ಜೀವನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಕೇವಲ ಶೇ. 1 ರಷ್ಟಿರುವ (ಸುಮಾರು 8 ರಿಂದ 9 ಲಕ್ಷ) ಸರ್ಕಾರಿ ಕಾರ್ಯಾಂಗದ ಮೇಲಿದೆ. ಈ ಜವಾಬ್ದಾರಿಯನ್ನು ನೌಕರರು ಅತ್ಯಂತ ಪ್ರೀತಿ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳು ಪೂರ್ಣಗೊಂಡಿದ್ದರು ಸಹ ಯಾರಲ್ಲಿಯೂ ಸಹ ದೇಶ ಭಕ್ತಿ ಕಾಣುತ್ತಿಲ್ಲ ಪ್ರತಿಯೊಬ್ಬರು ಸ್ವಭಕ್ತರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂದು ಚುನಾವಣೆಗಳಲ್ಲಿ ದುಡ್ಡಿಗಾಗಿ ನಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದ್ದು ಇದರಿಂದ ಸಮಾಜ, ದೇಶದ ಅಭಿವೃದ್ಧಿ ಕಷ್ಟ ಸಾಧ್ಯ ಹಾಗೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಚುನಾವಣೆಗಳಲ್ಲಿ ನಮ್ಮ ಮತದಾನದ ಹಕ್ಕನ್ನು ಮಾರಾಟ ಮಾಡಿಕೊಳ್ಳದೆ ಸೂಕ್ತ ವ್ಯಕ್ತಿಯನ್ನು ಚುಣಾಯಿಸುವ ಕುರಿತು ಪ್ರತಿಜ್ಞೆ ಮಾಡಲು ಕರೇ ನೀಡಿದರು.
ಪ್ರಾಮಾಣಿಕ ಅಧಿಕಾರಿಗಳಿದ್ದರೆ ಅಂತಹವರ ಪಾದಗಳನ್ನು ತಲೆಯ ಮೇಲಿಟ್ಟುಕೊಳ್ಳುವೆ ಒಂದು ವೇಳೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಜೈಲಿಗಟ್ಟಲು ಸಹ ಹಿಂಜರಿಯುವುದಿಲ್ಲ.
ಲೋಕಾಯುಕ್ತ ಸಂಸ್ಥೆಯಲ್ಲಿ ಹತ್ತು ಸಾವಿರ ಸುಳ್ಳು ಪ್ರಕರಣಗಳಿವೆ. ದಾಖಲಾದ ಪ್ರಕರಣಗಳು ಸುಳ್ಳು ಪ್ರಕರಣಗಳೆಂದು ಕಂಡು ಬಂದಲ್ಲಿ ಅಂತಹವರನ್ನು ಶಿಕ್ಷೆಗೆ ಒಳಪಡಿಸಲಾಗುವುದು.
ಲೋಕಾಯುಕ್ತ ಪ್ರಕರಣಗಳ ಮೇಲ್ವಿಚಾರಣೆಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿರುವಂತಹ ಹಕ್ಕುಗಳು ನಮಗೂ ಇದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
ವಿದ್ಯಾವಂತರಾದ ನಾವೆಲ್ಲರೂ ಭ್ರಷ್ಟಾಚಾರ ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಆತ್ಮ ಸಾಕ್ಷಿ ವಿರುದ್ಧ ಯಾವುದೇ ಕೆಲಸ ಮಾಡಬಾರದು. ಅಧಿಕಾರದಲ್ಲಿರುವ ಯಾರೇ ಆಗರಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಮಾತನಾಡಿ ನಿನ್ನಯೆ ದಿನ ಚಿಕ್ಕೋಡಿಯ ಇಪ್ಪತ್ತೆರೆಡು ಕಚೇರಿಗಳಿಗೆ ಭೇಟಿ ನೀಡಿ ಸಲಹೆ ಸೂಚನೆಯೊಂದಿಗೆ ಕ್ರಮಕ್ಕೂ ಶಿಫಾರಸ್ಸು ಮಾಡಿರುತ್ತಾರೆ. ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಸಾರ್ವಜನಿಕರ ತಳಮಟ್ಟದ ಸಮಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಒದಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ತಾವು ಮೇಲಿಂದ ಮೇಲೆ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದ ಅವರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ತದನಂತರ ಸಾರ್ವಜನಿಕರಿಂದ ಲೋಕಾಯುಕ್ತರ ಕಚೇರಿಯಲ್ಲಿ ದಾಖಲಾದ ದೂರು ಅರ್ಜಿಗಳ ವಿಲೇವಾರಿ ಕುರಿತು ವಿಚಾರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪನಿಬಂಧಕರಾದ ಅರವಿಂದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.





