ಬೆಳಗಾವಿ : ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ಬಸವರಾಜ ಶೇಗಾವಿ ಆಯ್ಕೆಯಾಗಿ 15 ದಿನ ಕಳೆದರೂ ನಾಮಫಲಕ ಹಾಗೂ ಕಚೇರಿಯ ಕೊಠಡಿ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದಿನ ಅಧ್ಯಕ್ಷ ವಿನಯ ನಾವಲಗಟ್ಟಿ ಅಧ್ಯಕ್ಷರ
ಕಚೇರಿಯಲ್ಲಿಯೇ ತಮ್ಮ ನಾಮಫಲಕ ಹಾಕಿಕೊಂಡು ಕುಳಿತಿದ್ದು ನೂತನ ಅಧ್ಯಕ್ಷ ಬಸವರಾಜ ಶೇಗಾವಿಗೆ ಕಚೇರಿಯಲ್ಲಿ ಕೊಠಡಿಯೇ ಇಲ್ಲದಂತಾಗಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇರುಸುಮುರುಸು ಉಂಟಾಗಿದೆ.
ನೂತನ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಶೇಗಾವಿ ಹಾಗೂ ನಗರ ಘಟಕದ ಅಧ್ಯಕ್ಷ ರಾಜಾಸಲೀಂ ಕಾಶಿಮ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಭೇಟಿಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಭೇಟಿ ವೇಳೆ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಬೇಕು. ಬರುವ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಸೂಚನೆ ನೀಡಿದ್ದಾರೆ. ಆದರೆ ನೂತನ ಅಧ್ಯಕ್ಷ ಬಸವರಾಜಗೆ ಕಚೇರಿಯಲ್ಲಿನ ಕೊಠಡಿ ಸಿಗದೆ ಇರುವುದು ಕಾರ್ಯನಿರ್ವಹಿಸುವುದು ದುಸ್ತರವಾಗಿದೆ.
ಇನ್ನೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ನೂತನ ಅಧ್ಯಕ್ಷರಿಗೆ 6 ತಿಂಗಳಲ್ಲಿ ಪಕ್ಷ ಸಂಘಟಿಸಿ ಕಾರ್ಯಕರ್ತರಲ್ಲಿ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಅವಧಿ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಆದರೆ ಬೆಳಗಾವಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಶೇಗಾವಿಗೆ ಕಚೇರಿಯಲ್ಲಿ ಕೊಠಡಿಯೇ ಸಿಕ್ಕಿಲ್ಲ. ಮಾಜಿ ಅಧ್ಯಕ್ಷ ವಿನಯ ನಾವಲಗಟ್ಟಿ ಅಧ್ಯಕ್ಷರ ಕಚೇರಿಯ ಕೊಠಡಿಯಲ್ಲಿಯೇ ವಾಸ್ತವ್ಯ ಹೂಡಿರುವುದು ನಾನಾ ಚರ್ಚೆಗೆ ಎಡೆಮಾಡಿಕೊಟ್ಟಿದ್ದು ಸುಳ್ಳಲ್ಲ.





