ಬೆಳಗಾವಿ : ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಅಧಿಕಾರ ಇದ್ದವರ ಕೈಗೆ ಇಡೀ ವ್ಯವಸ್ಥೆಯ ಆಟ ಬದಲಾಯಿಸುವ ಶಕ್ತಿ ಇರುತ್ತದೆ. ಸಧ್ಯ ಅಂತಹುದೇ ರಾಜಕೀಯ ಆಟ ಬೆಳಗಾವಿಯಲ್ಲಿ ನಡೆದಿದೆ.
ಕಳೆದ ಮೂರು ವರ್ಶಗಳಿಂದ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬಿಟ್ಟ ಬಾಣಗಳನ್ನು ಸಧ್ಯ ಸಹಕಾರ ಸಚಿವ ಲಕ್ಷ್ಮಣ ಸವದಿ ತಡೆದು ಮರಳಿ ತಿರು ಬಾಣಗಳನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದರ ಫಲವಾಗಿ ಸಧ್ಯ ಗೋಕಾಕ್ ಸಾಹುಕಾರ್ ಮಾಡಿದ್ದ ಕೆಲ ಬದಲಾವಣೆಗಳನ್ನು ಈಗ ಸವದಿ ಮರುಸ್ಥಾಪನೆ ಮಾಡಲು ಮುಂದಾಗುತ್ತಿದ್ದಾರೆ.
ಹೌದು ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವಿನ ರಾಜಕೀಯ ವೈರತ್ವ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಎರಡೂ ಮನೆತನಗಳ ನಡುವೆ ಕೆಲವು ಭಿನ್ನಾಭಿಪ್ರಾಯ ಇವೆ. ಈ ಮಧ್ಯೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿಗೆ ಸಧ್ಯ ಡಿಕೆಸಿ ಸಂಪುಟದಲ್ಲಿ ಸಚಿವಸ್ಥಾನ ಸಿಕ್ಕಿದ್ದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಲವು ಮಹತ್ವದ ಬದಲಾವಣೆಗೆ ಸಹಕಾರಿಯಾಗಿದೆ.
ಸತೀಶ್ ಜಾರಕಿಹೊಳಿಗೆ ಸವದಿ ಟಕ್ಕರ್ : ಕಳೆದ ಎರಡು ದಶಕಗಳ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಕತ್ತಿ ಹಿಡಿತದಿಂದ ಜಾರಕಿಹೊಳಿ ಹಿಡಿತಕ್ಕೆ ಬದಲಾಯಿತು. ಈ ವೇಳೆ ಸಚಿವ ಲಕ್ಷ್ಮಣ ಸವದಿ ಅಳಿಯ ಶಂಕರ ನಂದೇಶ್ವರ ಅವರನ್ನು ಅಥಣಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸ್ಥಾನದಿಂದ ವರ್ಗಾವಣೆ ಮಾಡುವ ಮೂಲಕ ಸವದಿಗೆ ಜಾರಕಿಹೊಳಿ ಸಹೋದರರು ಟಕ್ಕರ್ ಕೊಟ್ಟಿದ್ದರು. ಆದರೆ ಸಧ್ಯ ಸಹಕಾರಿ ಸಚಿವರಾದ ಲಕ್ಷ್ಮಣ ಸವದಿ ಮತ್ತೆ ಅಳಿಯನನ್ನು ಈ ಹಿಂದಿನ ಜಾಗಕ್ಕೆ ಮರಳಿ ತಂದಿದ್ದಾರೆ.
ಅಥಣಿಯಲ್ಲಿ ಲಕ್ಷ್ಮಣ ಸವದಿ ಪ್ರಭಾವ ಕುಗ್ಗಿಸುವ ಉದ್ದೇಶದಿಂದ ಇವರ ಅಳಿಯನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಈಗ ಇದೇ ಲಕ್ಷ್ಮಣ ಸವದಿ ಮತ್ತೆ ತಮ್ಮ ಅಳಿಯನನ್ನು ಹಳೇ ಜಾಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಕೌಂಟರ್ :
ಕೇವಲ ಅಳಿಯನನ್ನು ವರ್ಗಾವಣೆಗೊಂಡ ಜಾಗದಲ್ಲಿ ಮರಳಿ ತರುವುದು ಮಾತ್ರವಲ್ಲದೆ ಈ ಹಿಂದೆ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರು ನೇಮಕ ಮಾಡಿದ್ದ ಆದೇಶಕ್ಕೂ ಸಧ್ಯ ತಡೆ ಕೊಡಲಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿದ್ದ ಮೂವರ ಆಯ್ಕೆಯನ್ನು ರದ್ದುಗೊಳಿಸಲಾಗಿದೆ.
ಬಿಡಿಸಿಸಿ ಬ್ಯಾಂಕ್ ಗೆ ಸರಕಾರದಿಂದ ನಾಮನಿರ್ದೇಶನ ಗೊಂಡಿದ್ದ ಸುನೀತಾ ಐಹೊಳೆ, ಸುರೇಶ್ ಇಟಗಿ, ಬಾಳೇಶ ದಾಸನಟ್ಟಿ ಈ ಮೂವರು ನಿರ್ದೇಶಕರ ನಾಮನಿರ್ದೇಶ ರದ್ದುಗೊಂಡಿದೆ. ಸಪ್ಟೆಂಬರ್ ನಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಹೈ ಕೋರ್ಟ್ ಈ ತಿದ್ದುಪಡಿಗೆ ತಡೆಯಾಜ್ಞೆ ನೀಡಿದೆ.





