ಬೆಳಗಾವಿ : ನಗರದ ಹಿಂಡಾಲ್ಕೊ ಕಂಪನಿ ಆವರಣದಲ್ಲೇ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ನಡೆದಿದೆ.
ಕಾರ್ಮಿಕ ಶಂಕರ ತಳವಾರ (24) ಆತ್ಮಹತ್ಯೆಗೆ ಶರಣಾದ ಯುವಕ. ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ನಿವಾಸಿಯಾದ ಮೃತ ಯುವಕ ಕಳೆದ 6 ವರ್ಷಗಳಿಂದ ಹಿಂಡಾಲ್ಕೊ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕೆಲಸ ಮಾಡುವ ಕಂಪನಿಯಲ್ಲಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೂ ಮುನ್ನ ಯುವಕ ಡೆತ್ ನೋಟ್ ಬರೆದಿಟ್ಟಿದ್ದು, ಕಂಪನಿಯಲ್ಲಿ ಸ್ಥಳೀಯ ಯುವಕರಿಗೆ ಅನ್ಯಾಯವಾಗುತ್ತಿದೆ. ಎಸ್ಎಸ್ಎಲ್ ಸಿ ಹಾಗೂ ಐಟಿಐ ಮಾಡಿದವರನ್ನು ಕೆಲಸಕ್ಕೆ ತಗೆದುಕೊಳ್ಳುತ್ತಿಲ್ಲ. ಈ ಹಿಂದೆ ಇದ್ದ ಕಾರ್ಮಿಕರನ್ನು ಕಾಯಂ ಮಾಡಲು ಹಣ ಪಡೆದು ಮೋಸ ಮಾಡಲಾಗಿದೆ ಎಂದು ಯುವಕ ಉಲ್ಲೇಖಿಸಿದ್ದಾನೆ.
ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತನ ಪೋಷಕರು ಹಾಗೂ ಗ್ರಾಮಸ್ಥರು ಹಿಂಡಾಲ್ಕೊ ಕಂಪನಿಗೆ ಕಲ್ಲು ತೂರಿ ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರರು ಹರಸಾಹಸ ಪಡುವಂತಾಯಿತು. ಸ್ಥಳಕ್ಕೆ ಶಾಸಕ ರಾಜು ಸೇಠ್ ಹಾಗೂ ಜಿಲ್ಲಾಧಿಕಾರಿ ಭೇಟಿನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
**************
ಏನೆಲ್ಲಾ ಭರವಸೆ…..?
ಮುತ್ಯಾನಟ್ಟಿ ಗ್ರಾಮದ ಹಿರಿಯರು, ಆತ್ಮಹತ್ಯೆ ಮಾಡಿಕೊಂಡ ತಂದೆ, ತಾಯಿ ಹಾಗೂ ಸಹೋದರರು ಮತ್ತು ಹಿಂಡಾಲ್ಕೋ ಕಂಪನಿಯವರೊಂದಿಗೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಕಮಿಷ್ನರ್ ಭೂಷಣ್ ಬೊರಸೆ ಸಭೆ ನಡೆಸಿ ಮೃತ ಶಂಕರ ಸಹೋದರಿಗೆ ಕೆಲಸ ಹಾಗೂ ಸೂಕ್ತ ಪರಿಹಾರ ಮತ್ತು ಮುತ್ಯಾನಟ್ಟಿ ಗ್ರಾಮಸ್ಥ ಯುವಕರಿಗೆ ಉದ್ಯೋಗ ನೀಡುವ ಸಭೆಯನ್ನು ನಿಗದಿ ಪಡಿಸುವುದಾಗಿ ಹೇಳಿದ ಮೇಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.
ಕಾರ್ಖಾನೆ ಅನ್ಯಾಯ ವಿರೋಧಿಸಿ ಆವರಣದಲ್ಲೇ ಯುವಕ ಆತ್ಮಹತ್ಯೆ ; ಸಭೆಯಲ್ಲಿ ಏನೆಲ್ಲ ಭರವಸೆ…?



