ಚಂದುಳ್ಳಿ ಚೆಲುವಿ ಕುತಂತ್ರಕ್ಕೆ ಬಲಿಯಾದ ಮಾಜಿ ಸೈನಿಕ ; 2 ಕೋಟಿ ರೂ. ವಿಮಾ ಹಣಕ್ಕೆ ಕೊಲೆ..!

ಬೆಳಗಾವಿ : ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪತಿಗೆ ಪ್ರಿಯಕರನಿಂದ ಕೀಟನಾಶಕ ತರಿಸಿ ಮಾಜಿ ಸೈನಿಕನಿಗೆ ಹಾಕಿ ಕೊಲೆ ಮಾಡಿದ್ದ ಘಟನೆ ಮೂರು ತಿಂಗಳ ನಂತರ ಬಯಲಾಗಿದೆ. ಜೊತೆಗೆ ಎರಡು ಕೋಟಿ ರೂ. ವಿಮೆ ಹಣಕ್ಕಾಗಿ ಕೊಲೆ ನಡೆದಿದೆ ಎಂಬ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.
ಹೌದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ ಮಂಜರಗಿ (45) ಕೊಲೆಯಾದ ಮಾಜಿ ಯೋಧ. ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಮೇಲೆ ಕೊಲೆ ಆರೋಪ ಕೇಳಿಬಂದಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಹುಕ್ಕೇರಿಯಲ್ಲಿ ನಡೆದ ಲಕ್ಷ್ಮೀದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ಸಂದೀಪ್ ರಸ್ತೆ ಅಪಘಾತಕ್ಕೀಡಾಗಿದ್ದರು. ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೇ ಅಪಘಾತವನ್ನು ದಾಳವಾಗಿ ಬಳಸಿಕೊಂಡ ಪತ್ನಿ ಸುಮಾ, ಆಸ್ಪತ್ರೆಯಲ್ಲೇ ಪ್ರಿಯಕರನ ಜೊತೆಗೂಡಿ ಗಂಡನ ಕೊಲೆಗೆ ಪ್ಲಾನ್ ಮಾಡಿದ್ದಾಳೆ. ಆಸ್ಪತ್ರೆಯಲ್ಲಿ ಗ್ಲುಕೋಸ್ ಬಾಟಲಿಗೆ ಕೀಟನಾಶಕ ಬೆರೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪತಿ ಮೃತಪಟ್ಟರೆ 2 ಕೋಟಿ ರೂ. ವಿಮೆ ಹಣ ಬರುತ್ತದೆ ಹಾಗೂ ತನ್ನ ಅನೈತಿಕ ಸಂಬಂಧಕ್ಕೆ ಯಾರೂ ಅಡ್ಟಿ ಇರುವುದಿಲ್ಲ ಎಂದು ಪತ್ನಿಯು ಕೊಲೆಗೆ ಮುಂದಾಗಿದ್ದಾಳೆ. ಅದರಂತೆ, ಗ್ಲುಕೋಸ್ ಬಾಟಲ್‌ಗೆ ವಿಷ ಬೆರೆಸಿ ಸಾಯಿಸಿದ್ದಾಳೆ. ಸಾವಿನ ಬಳಿಕ ಯಾರಿಗೂ ಅನುಮಾನ ಬಾರದಂತೆ ಅಂತ್ಯಕ್ರಿಯೆಯನ್ನೂ ಮುಗಿಸಿದ್ದಳು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಳಿಕ ಆರೋಪಿ ಮಹಿಳೆ ಯಾರಿಗೂ ಅನುಮಾನ ಬಾರದಂತೆ ನಾಟಕವಾಡಿದ್ದಳು. ಪ್ಲಾನ್ ಮಾಡುವಾಗ ಪ್ರಿಯಕರ ಪುಂಡಲೀಕನಿಗೂ ಹಣದ ಆಮಿಷವೊಡ್ಡಿದ್ದು, ಬಳಿಕ ಆತನಿಗೆ ಪಾಲು ನೀಡದೇ ಸತಾಯಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಈ ಸುಳಿವಿನ ಮೇರೆಗೆ ಯಮಕನಮರಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದಾಗ ಘಟನೆಗೆ ತಿರುವು ಸಿಕ್ಕಿದೆ. ಸದ್ಯ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರನನ್ನು ಯಮಕನಮರಡಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಕೊಲೆಯ ಸಂಪೂರ್ಣ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಾಗಲಿದೆ.
ಪ್ರಿಯಕರನ ಸ್ಪೋಟಕ ಹೇಳಿಕೆ : ಮಹಿಳೆಯ ಪ್ರಿಯಕರ ಪುಂಡಲೀಕ ಡೊಂಬರ್ ಸ್ಪೋಟಕ ವೀಡಿಯೋ ಹೇಳಿಕೆ ನೀಡಿದ್ದು, “ಘೋಡಗೇರಿಯಲ್ಲಿ ನಾನು ಸಣ್ಣ ಎಗ್ ರೈಸ್ ಅಂಗಡಿ ನಡೆಸುತ್ತಿದ್ದೆ. ಅಲ್ಲಿಗೆ ಸಂದೀಪ್ ಬರುತ್ತಿದ್ದ. ನಿವೃತ್ತಿಯಾದ ಬಳಿಕ ಖಾಲಿ ಕುಳಿತುಕೊಳ್ಳುವುದಕ್ಕಿಂತ ಟೀ ಅಂಗಡಿ ಆರಂಭಿಸಿದ ಆತ, ಆಳು ಸಿಗದ ಕಾರಣ ನನ್ನ ಶಾಪ್ ಬಂದ್ ಮಾಡಿಸಿ ತನ್ನ ಅಂಗಡಿಗೆ ಕರೆದುಕೊಂಡು ಹೋಗಿದ್ದ ಎಂದಿದ್ದಾನೆ. ಬಳಿಕ ಸಂದೀಪ್ ಪತ್ನಿ ಸುಮಾ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಸಂಬಂಧವೂ ಬೆಳೆದಿತ್ತು” ಎಂದು ಹೇಳಿದ್ದಾನೆ.
ಇನ್ನೂ ಗಂಭೀರ ಆರೋಪ ಮಾಡಿರುವ ಆತ, “ಮನೆಯಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಹಾಗೂ ನಿದ್ದೆ ಮಾತ್ರೆ ಇಟ್ಟುಕೊಂಡು ಸುಮಾ ಸಂದೀಪ್‌ಗೆ ಕುಡಿಸುತ್ತಿದ್ದಳು. ಯಾಕೆ ಹೀಗೆ ಮಾಡುತ್ತಿದ್ದೀಯೆ ಎಂದು ಕೇಳಿದರೆ, ‘ಗಂಡ ಸತ್ತರೂ ಸಾಯಲಿ’ ಎಂದು ಹೇಳುತ್ತಿದ್ದಳು” ಎಂದು ಆರೋಪಿಸಿದ್ದಾನೆ.
ಹುಕ್ಕೇರಿ ಜಾತ್ರೆಯಿಂದ ವಾಪಸ್ ಬರುತ್ತಿದ್ದ ವೇಳೆ ಸಂದೀಪ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. “ಆಸ್ಪತ್ರೆಯಲ್ಲಿ ಇದ್ದಾಗ ಸುಮಾ ಕರೆ ಮಾಡಿ ಹುಳುಗಳಿಗೆ ಹೊಡೆಯುವ ವಿಷದ ಔಷಧ ತಂದುಕೊಡು ಎಂದಳು.
ನಾನು ಔಷಧ ತಂದುಕೊಟ್ಟ ಮಾರನೇ ದಿನವೇ ಸಂದೀಪ್ ಮೃತಪಟ್ಟ. ಇದರಿಂದ ಸಾವಿನ ಬಗ್ಗೆ ನನಗೆ ಅನುಮಾನ ಮೂಡಿದೆ” ಎಂದು ಪುಂಡಲೀಕ ವಿಡಿಯೋದಲ್ಲಿ ಹೇಳಿದ್ದಾನೆ.
ಇದಲ್ಲದೆ, “ಸಂದೀಪ್ ಮೇಲೆ ಎರಡು ಕೋಟಿ ರೂ. ಇನ್ಶುರೆನ್ಸ್ ಮಾಡಿಸಿದ್ದೇನೆ. ಹಣ ಬಂದ ಮೇಲೆ ನಿನ್ನ ಎರಡು ಮಕ್ಕಳು, ನನ್ನ ಎರಡು ಮಕ್ಕಳು ಸೇರಿ ಬೆಳಗಾವಿಗೆ ಹೋಗಿ ನೆಲೆಸೋಣ ಎಂದು ಸುಮಾ ಹೇಳುತ್ತಿದ್ದಳು” ಎಂಬ ಆರೋಪವೂ ಮಾಡಿದ್ದಾನೆ.
ಸಂದೀಪ್ ಸತ್ತ ನಂತರ ನಾನು ಕೊಟ್ಟ ಔಷಧ ಸೇರಿದಂತೆ ಬೇರೆ ವಸ್ತುಗಳನ್ನು ಎಲ್ಲಿಯಾದರೂ ಚೆಲ್ಲಿಬಿಡು ಎಂದು ಸುಮಾ ಹೇಳಿದ್ದಳು. ಒಬ್ಬ ಮಾಜಿ ಸೈನಿಕನ ಸಾವಿನ ಪ್ರಕರಣ ಇದಾಗಿದ್ದು, ಸಮಗ್ರ ಮರು ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಒಂದು ರೂಪಾಯಿ ವಿಮೆ ಹಣವೂ ಬಿಡುಗಡೆ ಆಗಬಾರದು” ಎಂದು ಪುಂಡಲೀಕ ಒತ್ತಾಯಿಸಿದ್ದಾನೆ.
ನಾನು ಹೇಳುತ್ತಿರುವುದರಲ್ಲಿ ಸುಳ್ಳಿದ್ದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ” ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇನ್ನೊಂದೆಡೆ, ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ನಿನ್ನೆ ಮೃತ ಸಂದೀಪ್ ಮಾಂಜರಿ ಅವರ ಶವವನ್ನು ಹೊರತೆಗೆದು ಮರು ಪರಿಶೀಲನೆ ನಡೆಸಿದ್ದಾರೆ.


