Select Page

Advertisement

ಬೆಳಗಾವಿಗರು ಗಮನಿಸಬೇಕಾದ ಸುದ್ದಿ ; ಜಿಲ್ಲಾಡಳಿತದಿಂದ‌ ತುರ್ತು ಸಹಾಯವಾಣಿ..!

ಬೆಳಗಾವಿಗರು ಗಮನಿಸಬೇಕಾದ ಸುದ್ದಿ ; ಜಿಲ್ಲಾಡಳಿತದಿಂದ‌ ತುರ್ತು ಸಹಾಯವಾಣಿ..!

ಬೆಳಗಾವಿ : ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಈ ಕೆಳಗಿನ ಮಾಹಿತಿಯನ್ನು ಹಂಚಿಕೊಂಡಿದೆ.

ವೈಮಾನಿಕ ನಿರ್ಬಂಧ ಮತ್ತು ಪ್ರಚಲಿತ ಸ್ಥಿತಿ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ ಸೇರಿದಂತೆ ಒಟ್ಟು 11 ದೇಶಗಳ ವೈಮಾನಿಕ ಮಾರ್ಗಗಳನ್ನು (Airspace) ಮಾರ್ಚ್ 2ರವರೆಗೆ ಮುಚ್ಚಲಾಗಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಹಾಗೂ ಕರ್ನಾಟಕದ ಅನೇಕ ಪ್ರಯಾಣಿಕರು ಯುಎಇ (ದುಬೈ) ಸೇರಿದಂತೆ ವಿವಿಧ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ.

ಜಿಲ್ಲಾಡಳಿತದ ಕ್ರಮಗಳು : ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ, ರಾಜ್ಯ ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ 24×7 ಕಾರ್ಯನಿರ್ವಹಿಸುತ್ತಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಗಳು ನೀಡುವ ಸೂಚನೆಗಳನ್ನು ಜಿಲ್ಲಾಡಳಿತವು ನಿರಂತರವಾಗಿ ಗಮನಿಸುತ್ತಿದೆ. ಸಹಾಯವಾಣಿ ಸಂಖ್ಯೆಗಳಿಗೆ ಬೆಳಗಾವಿ ಜಿಲ್ಲೆಯ ನಿವಾಸಿಗಳು ಅಥವಾ ಅವರ ಸಂಬಂಧಿಕರು ಹೆಚ್ಚಿನ ಮಾಹಿತಿಗಾಗಿ ಮತ್ತು ಸಹಾಯಕ್ಕಾಗಿ ಸಂಪರ್ಕಿಸಬಹುದು.

ಬೆಳಗಾವಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ 0831-2407290, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 080-22340676, 080-22253707 , ಟೋಲ್ ಫ್ರೀ ಸಂಖ್ಯೆ: 1070 ಗೆ ಕರೆ ಮಾಡಿ ಮಾಹಿತಿ ಹಾಗೂ ಸಹಾಯ ಪಡೆಯಬಹುದು.

ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು : ಮಧ್ಯಪ್ರಾಚ್ಯ ದೇಶಗಳಲ್ಲಿರುವ ಕರ್ನಾಟಕದ ನಿವಾಸಿಗಳು ಹಾಗೂ ಜಿಲ್ಲೆಯವರಿದ್ದಲ್ಲಿ ಅಲ್ಲಿನ ಸ್ಥಳೀಯ ಸರ್ಕಾರಗಳು ನೀಡುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಂಕಷ್ಟದಲ್ಲಿರುವವರು ಆಯಾ ದೇಶದ ಭಾರತೀಯ ರಾಯಭಾರಿ ಕಚೇರಿಯ ಸಹಾಯವಾಣಿಗೆ ಕರೆ ಮಾಡಬೇಕು ಅಥವಾ ‘ಸಾರಥಿ ಸಹಾಯತಾ’ (Sarthi Sahayata) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ವಿಸಾ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಹತ್ತಿರದ ಎಫ್.ಆರ್.ಆರ್.ಒ (FRRO) ಕಚೇರಿಯನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಶನ್ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!